ಪ್ರತೀ ವರ್ಷ ಅಕ್ಟೋಬರ್ 27 ಅನ್ನು ಕಾಲಾಳು ಪಡೆ ಅಥವಾ ಪದಾತಿ ದಳ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಕರ್ತವ್ಯದ ವೇಳೆ ತಮ್ಮ ಪ್ರಾಣವನ್ನು ದೇಶಕ್ಕಾಗಿ ಸಮರ್ಪಿಸಿದ ಭಾರತೀಯ ಸೇನೆಯ ಹೋರಾಟವನ್ನು ಗುರುತಿಸಿ, ಗೌರವಿಸಲಾಗುತ್ತದೆ. ಈ ವರ್ಷ 78ನೇ ಪದಾತಿ ದಳ ದಿನವನ್ನು ಆಚರಿಸಲಾಗುತ್ತಿದೆ.
ಮಹತ್ವ: ಭಾರತೀಯ ಸೇನೆಯ ಸಿಖ್ ರೆಜಿಮೆಂಟ್‌ನ ಮೊದಲ ಬೆಟಾಲಿಯನ್ ಪಾಕಿಸ್ತಾನದ ಸೇನೆ ಮತ್ತು ಲಷ್ಕರ್ ಉಗ್ರರನ್ನು ಹಿಮ್ಮೆಟ್ಟಿಸಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಇತಿಹಾಸ: 1947ರ ಅಕ್ಟೋಬರ್ 22ರಂದು ಪಾಕ್ ಸೈನಿಕರು ಜಮ್ಮು ಕಾಶ್ಮೀರವನ್ನು ಪ್ರವೇಶಿಸಿದ್ದರು. ಕಣಿವೆ ನಾಡನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು ಮತ್ತು ಅದನ್ನು ಪಾಕ್‌ನೊಂದಿಗೆ ವಿಲೀನಗೊಳಿಸುವುದು ಅವರ ದುರುದ್ದೇಶವಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಶ್ರೀನಗರದ ಮಹಾರಾಜ ಹರಿಸಿಂಗ್ ಅಕ್ಟೋಬರ್ 26ರಂದು ಭಾರತ ಸೇರುವ ಒಪ್ಪಂದಕ್ಕೆ ಸಹಿ ಹಾಕಿದರು. ನಂತರ ಜಮ್ಮು ಕಾಶ್ಮೀರ ಭಾರತದ ಭಾಗವಾಯಿತು. ಈ ಒಪ್ಪಂದದೊಂದಿಗೆ ಅವರು ದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಪಾಕ್ ಆಕ್ರಮಣಕಾರರ ವಿರುದ್ಧ ಹೋರಾಡಲು ಭಾರತೀಯ ಸೇನೆ ಮತ್ತು ಅದರ ಪಡೆಗಳನ್ನು ಬೆಂಬಲಿಸಿದರು.
ಪಾಕ್ ಬೆಂಬಲಿತ ಬುಡಕಟ್ಟು ಉಗ್ರರ ವಿರುದ್ಧ ಹೋರಾಡಲು ಸಿಖ್ ರೆಜಿಮೆಂಟ್‌ನ ಬೆಟಾಲಿಯನ್ ಅನ್ನು ಶ್ರೀನಗರದ ವಾಯುನೆಲೆಗೆ ಕಳುಹಿಸಲಾಗಿತ್ತು. ಆದಾಗ್ಯೂ, ಮೊದಲ ಬೆಟಾಲಿಯನ್ ಯುದ್ಧಭೂಮಿ ತಲುಪುವ ಮೊದಲೇ ಪಾಕ್ ಸೈನಿಕರು ವಾಯವ್ಯ ಫ್ರಾಂಟಿಯರ್ ಪ್ರಾಂತ್ಯದ (NWFP) ಪ್ರದೇಶಗಳಲ್ಲಿ ಸ್ವಯಂಸೇವಕರ ವೇಷದಲ್ಲಿ ಜಮ್ಮು ಕಾಶ್ಮೀರವನ್ನು ಪ್ರವೇಶಿಸಿದ್ದರು. ದಾಳಿಕೋರರು ಶ್ರೀನಗರದತ್ತ ಮುನ್ನುಗ್ಗುತ್ತಿದ್ದರು. ಅಕ್ಟೋಬರ್ 26ರ ರಾತ್ರಿ ತುರ್ತು ಸಭೆ ನಡೆಸಿದ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಸೇನೆಯನ್ನು ಶ್ರೀನಗರಕ್ಕೆ ರವಾನಿಸಿದ್ದರು. ನಂತರ ಸೇನೆ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿ ವಿಜಯ ಸಾಧಿಸಿದ್ದು ಇತಿಹಾಸ.
ಪದಾತಿ ದಳದ ಕುರಿತು: ಪದಾತಿ ದಳ ಭಾರತೀಯ ಸೇನೆಯ ಅತಿದೊಡ್ಡ ಭಾಗ. ಇದನ್ನು ಸೇನೆಯ ಬೆನ್ನೆಲುಬೆಂದುೂ ಕರೆಯುವರು. ದೈಹಿಕ ಸಾಮರ್ಥ್ಯ, ಆಕ್ರಮಣಶೀಲತೆ ಮತ್ತು ಶಿಸ್ತು ಈ ಯೋಧರ ಮೂಲಭೂತ ಗುಣಗಳು.