ನವದೆಹಲಿ: ಭಾರತದಿಂದ ಸುಮಾರು 100 ಯುವಕರನ್ನು ವಂಚನೆಯಿಂದ ರಷ್ಯಾಕ್ಕೆ ಸಾಗಿಸಿ ಉಕ್ರೇನ್‌ನೊಂದಿಗೆ ಯುದ್ಧಕ್ಕೆ ಕಳುಹಿಸಲಾಗ್ತಿದೆ ಎಂಬ ಸುದ್ದಿಗೆ ಭಾರತ ಸರ್ಕಾರ ಪ್ರತಿಕ್ರಿಯಿಸಿದೆ. ಶುಕ್ರವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಕೆಲವು ಭಾರತೀಯರು ಅಲ್ಲಿನ ಸೈನಿಕರಿಗೆ ಸಹಾಯಕರಾಗಿರುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯದ ಬಗ್ಗೆ ಮಾಸ್ಕೋದೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
"ನಾವು ಎಲ್ಲಾ ಭಾರತೀಯ ಪ್ರಜೆಗಳಿಗೆ ಸರಿಯಾದ ಎಚ್ಚರಿಕೆಯನ್ನು ವಹಿಸಲು ಮತ್ತು ಈ ಸಂಘರ್ಷದಿಂದ ದೂರವಿರಲು ಒತ್ತಾಯಿಸುತ್ತೇವೆ" ಎಂದು ಜೈಸ್ವಾಲ್ ತಿಳಿಸಿದರು. ಅಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಆ ಸಮಯದಲ್ಲಿ ಭಾರತೀಯರು ಉಕ್ರೇನ್-ರಷ್ಯಾ ಯುದ್ಧದಿಂದ ದೂರವಿರಲು ಬಯಸಿದ್ದರು ಎಂದು ಜೈಸ್ವಾಲ್ ಹೇಳಿದ್ದಾರೆ.
ಮತ್ತೊಂದೆಡೆ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಈಗಾಗಲೇ ಈ ವಿಷಯವನ್ನು ವಿದೇಶಾಂಗ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲ್ಲಾಳಿಗಳಿಂದ ವಂಚನೆಗೊಂಡು 12 ಮಂದಿ ಯುವಕರು ರಷ್ಯಾಕ್ಕೆ ಹೋಗಿದ್ದಾರೆ. ಇವರಲ್ಲಿ ಇಬ್ಬರು ತೆಲಂಗಾಣ ಮೂಲದವರು ಎನ್ನಲಾಗಿದೆ. ಉಳಿದವರು ಕರ್ನಾಟಕ, ಗುಜರಾತ್, ಕಾಶ್ಮೀರ ಮತ್ತು ಯುಪಿಯಿಂದ ಬಂದವರು. ಇವರೆಲ್ಲರಿಗೂ ರಷ್ಯಾದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಏಜೆಂಟರು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತರ ಕುಟುಂಬಗಳು ದೂರು ನೀಡಿದ್ದರಿಂದ ಸಚಿವ ಜೈಶಂಕರ್ ಹಾಗೂ ರಷ್ಯಾದಲ್ಲಿರುವ ಭಾರತೀಯ ರಾಯಭಾರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಓದಿ: ರಷ್ಯಾದಲ್ಲಿ ಸಿಲುಕಿರುವ ಕಲಬುರಗಿ ಯುವಕರನ್ನು ಕೇಂದ್ರ ಸರ್ಕಾರ ರಕ್ಷಿಸಬೇಕು: ಪ್ರಿಯಾಂಕ್ ಖರ್ಗೆ
ಸರ್ಕಾರ ಮುತುವರ್ಜಿ ವಹಿಸಿ ತವರಿಗೆ ಕರೆತರುವಂತೆ ಓವೈಸಿ ಕೋರಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಿಕ್ಕಿಬಿದ್ದ ಭಾರತೀಯರು ಪ್ರಸ್ತುತ ಪೋಲ್, ಖಾರ್ಕಿವ್, ರೋಸ್ಟೋವ್-ಆನ್-ಡಾವ್ ಮುಂತಾದ ಸ್ಥಳಗಳಲ್ಲಿದ್ದಾರೆ. ಅವರಲ್ಲಿ ಕೆಲವರು ಯುದ್ಧದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಅವರನ್ನೆಲ್ಲ ಕೆಲ ದಲ್ಲಾಳಿಗಳು ಅಲ್ಲಿಗೆ ಕಳುಹಿಸಿದ್ದಾರೆ. ಈ ಯುವಕರನ್ನು ವ್ಯಾಗ್ನರ್ ಸೈನ್ಯಕ್ಕೆ ಸೇರಿಸಲಾಗಿದೆ ಎಂದು ಹೇಳಲಾಗಿದೆ. ಉತ್ತರ ಭಾರತದಲ್ಲಿ ಈ ರೀತಿ ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಅವರನ್ನು ರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.
ನಮ್ಮ ನೆರೆಯ ದೇಶವಾದ ನೇಪಾಳದಿಂದಲೂ ಹೆಚ್ಚಿನ ಸಂಖ್ಯೆಯ ಯುವಕರು ರಷ್ಯಾಕ್ಕೆ ಹೋಗಿ ಸೈನ್ಯಕ್ಕೆ ಸೇರಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅವರ ಸಂಖ್ಯೆ 200 ಕ್ಕಿಂತ ಹೆಚ್ಚಾಗಿದೆ. ಆರು ನೇಪಾಳಿಗಳು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತೋರುತ್ತದೆ. ನೇಪಾಳ ಸರ್ಕಾರವು ತನ್ನ ಪ್ರಜೆಗಳನ್ನು ಸೇನೆಗೆ ಸೇರಿಸಿಕೊಳ್ಳದಂತೆ ಈಗಾಗಲೇ ಮಾಸ್ಕೋಗೆ ಮನವಿ ಮಾಡಿದೆ.
ಓದಿ: ರಷ್ಯಾದಲ್ಲಿ ಸಿಲುಕಿರುವ ಯುವಕರ ರಕ್ಷಣೆಗೆ ಕೋರಿ ವಿದೇಶಾಂಗ ಸಚಿವರಿಗೆ ಖರ್ಗೆ ಪತ್ರ