ನವದೆಹಲಿ: ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯದಂತಹ ಯುದ್ಧ ನೌಕೆಗಳ ಮೇಲೆ ಹಾರುವ ಸಾಮರ್ಥ್ಯದ ರಫೇಲ್ ಮೆರೈನ್ ಫೈಟರ್ಜೆಟ್ಗಳನ್ನು ಫ್ರಾನ್ಸ್ನಿಂದ ಖರೀದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಕಳೆದ ವರ್ಷವೇ ಪ್ರಸ್ತಾವ ಸಲ್ಲಿಸಲಾಗಿದೆ. ಇದೀಗ ಆ ಯೋಜನೆಗೆ ಚಾಲನೆ ಸಿಗಲಿದೆ.
ಯುದ್ಧ ವಿಮಾನಗಳ ಖರೀದಿಗಾಗಿ ಫ್ರಾನ್ಸ್‌ನೊಂದಿಗೆ ಮೇ 30 ರಂದು ಒಪ್ಪಂದ ಮಾತುಕತೆ ಪ್ರಾರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಫೈಟರ್ ಜೆಟ್ ಯುದ್ಧ ವಿಮಾನಗಳ ಖರೀದಿಗೆ ಅಧಿಕೃತ ಮಾತುಕತೆಗಳು ಆರಂಭವಾಗಲಿವೆ.
ಭಾರತೀಯ ನೌಕಾಪಡೆಗೆ ಫೈಟರ್ ಜೆಟ್ ವಿಮಾನಗಳನ್ನು ನೀಡುವ ಒಪ್ಪಂದದಲ್ಲಿ ಅಧಿಕೃತ ಮಾತುಕತೆಗಳನ್ನು ಆರಂಭಿಸಲು ಫ್ರೆಂಚ್ ತಂಡವು ಭಾರತೀಯ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡಲಿದೆ. ಖರೀದಿ ಮಾತುಕತೆಗಳು ಪೂರ್ಣಗೊಂಡ ಬಳಿಕ ಎರಡೂ ಯುದ್ಧ ನೌಕೆಗಳು ವಿಮಾನವಾಹಕ ವ್ಯವಸ್ಥೆಯನ್ನು ಪಡೆಯಲಿವೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಒಪ್ಪಂದ ಮಾತುಕತೆಗೆ ಬರುವ ಫ್ರೆಂಚ್ ತಂಡವು, ರಫೇಲ್ ಫೈಟರ್ಜೆಟ್ಗಳನ್ನು ತಯಾರಿಸುವ ಡಸಾಲ್ಟ್ ಏವಿಯೇಷನ್ ಮತ್ತು ಥೇಲ್ಸ್ ಸೇರಿದಂತೆ ಆ ದೇಶದ ರಕ್ಷಣಾ ಸಚಿವಾಲಯ ಹಾಗೂ ಅದರ ಉದ್ಯಮದ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಭಾರತದ ಪರವಾಗಿ ರಕ್ಷಣಾ ನಿರ್ವಹಣಾ ವಿಭಾಗ ಮತ್ತು ಭಾರತೀಯ ನೌಕಾಪಡೆಯ ಸದಸ್ಯರು ತಂಡದಲ್ಲಿ ಇರಲಿದ್ದಾರೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಫ್ರಾನ್ಸ್‌ನೊಂದಿಗೆ ಮಾತುಕತೆ ಪೂರ್ಣಗೊಳಿಸಿ ಒಪ್ಪಂದ ಕುದುರಿಸಲು ಪ್ರಯತ್ನಿಸುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.
ಕಳೆದ ವರ್ಷವೇ ಪ್ರಸ್ತಾವ ಸಲ್ಲಿಕೆ: ಇನ್ನು, ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯಕ್ಕಾಗಿ ರಫೇಲ್ ಮೆರೈನ್ ಜೆಟ್‌ಗಳನ್ನು ಖರೀದಿಸಲು ಭಾರತ ಕಳೆದ ಡಿಸೆಂಬರ್ನಲ್ಲಿ ಸಲ್ಲಿಸಿದ ಪ್ರಸ್ತಾಪವನ್ನು (ಟೆಂಡರ್) ಫ್ರಾನ್ಸ್ ಒಪ್ಪಿಕೊಂಡಿದೆ. ಭಾರತ ಕರೆದಿದ್ದ ಟೆಂಡರ್ ಪತ್ರಕ್ಕೆ ಫ್ರಾನ್ಸ್ ಪ್ರತಿಕ್ರಿಯೆಯನ್ನೂ ಸಲ್ಲಿಸಿದೆ. ವಿಮಾನದ ಬೆಲೆ ಸೇರಿದಂತೆ ಒಪ್ಪಂದದ ಇತರ ವಿವರಗಳನ್ನು ಪರಿಶೀಲಿಸಿದ ಬಳಿಕ ಫ್ರಾನ್ಸ್ ಜೊತೆಗೆ ಭಾರತ ಒಡಂಬಡಿಕೆಯನ್ನು ನಡೆಸಲು ಮುಂದಾಗಲಿದೆ.
ಭಾರತೀಯ ತಂಡವು ಫ್ರೆಂಚ್ ಸರ್ಕಾರಿ ಅಧಿಕಾರಿಗಳೊಂದಿಗೆ ಅಂತಿಮ ಮಾತುಕತೆ ನಡೆಸಲಿದೆ. ಇದು ಸರ್ಕಾರಿ ಒಪ್ಪಂದವಾದ ಕಾರಣ, ವಿಮಾನಗಳ ಬೆಲೆ ಮತ್ತು ವಾಣಿಜ್ಯ ಒಪ್ಪಂದದ ಚೌಕಾಸಿ ನಡೆಸಲಿದೆ.
ಒಪ್ಪಂದದ ಗಾತ್ರ, ಎಷ್ಟು ವಿಮಾನಗಳ ಖರೀದಿ?: ಭಾರತ ಮತ್ತು ಫ್ರಾನ್ಸ್ ನಡುವೆ 26 ರಫೇಲ್ ಮೆರೈನ್ ಫೈಟರ್ ಜೆಟ್‌ಗಳ ಖರೀದಿಗೆ 50 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ನಡೆಯಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಫ್ರಾನ್ಸ್ನ ಡಸಾಲ್ಟ್ ಕಂಪನಿಯಿಂದ ರಫೇಲ್ ಫೈಟರ್ ಜೆಟ್‌ಗಳನ್ನು ಭಾರತ ಪಡೆದುಕೊಂಡಿದೆ. ಹೆಚ್ಚುವರಿಯಾಗಿ ಯುದ್ಧನೌಕೆಗಳಲ್ಲಿ ವಿಮಾನ ಹೊಂದಲು ಈ ಖರೀದಿ ಒಪ್ಪಂದ ನಡೆಯಲಿದೆ.
ಇದನ್ನೂ ಓದಿ: ನೌಕಾಪಡೆಗೆ 26 ರಫೇಲ್ ಎಂ ಫೈಟರ್ ಜೆಟ್ ಖರೀದಿ; ಫ್ರಾನ್ಸ್ಗೆ ಭಾರತದಿಂದ ಅಧಿಕೃತ ವಿನಂತಿ ಪತ್ರ