ನವದೆಹಲಿ: ಭಾರತ ಮತ್ತು ಚೀನಾದ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದ್ದ ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಗಸ್ತು ತಿರುಗುವ ಬಗ್ಗೆ ಉಭಯ ರಾಷ್ಟ್ರಗಳು ಸಂಧಾನಕ್ಕೆ ಬಂದಿವೆ. ಎರಡೂ ದೇಶಗಳ ಯೋಧರು ಈ ಭಾಗದಲ್ಲಿ ಗಸ್ತು ತಿರುಗಲು ಒಪ್ಪಂದ ಮಾಡಿಕೊಂಡಿದ್ದಾಗಿ ಕೇಂದ್ರ ಸರ್ಕಾರ ಇಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, 2020ರಲ್ಲಿ ಉದ್ಭವಿಸಿದ ಸಮಸ್ಯೆಯಾದ ಪೂರ್ವ ಲಡಾಖ್‌ನ ಎಲ್ಎಸಿಯಲ್ಲಿ ಗಸ್ತು ತಿರುಗುವ ಬಗ್ಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ದ್ವಿಪಕ್ಷೀಯ ಸರಣಿ ಮಾತುಕತೆಯು ಫಲಪ್ರದವಾಗಿದೆ. ಎಲ್‌ಎಸಿ ಗಡಿಯಲ್ಲಿ ಗಸ್ತಿಗೆ ಸೇನೆಗಳು ಸಂಧಾನಕ್ಕೆ ಬಂದಿವೆ ಎಂದರು.
ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತು ತಿರುಗುವುದಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಮಧ್ಯೆ ಬಿಕ್ಕಟ್ಟು ಉಂಟಾಗಿತ್ತು. ಭಾರತ ಮತ್ತು ಚೀನಾದ ರಾಜತಾಂತ್ರಿಕರು ಮತ್ತು ಮಿಲಿಟರಿ ಸಂಧಾನಕಾರರು ಈ ಕುರಿತು ಮಾತುಕತೆ ನಡೆಸಿ, ಒಪ್ಪಂದಕ್ಕೆ ಬಂದಿದ್ದಾಗಿ ತಿಳಿಸಿದರು.
#WATCH | Delhi: On agreement on patrolling at LAC, Foreign Secretary Vikram Misri says, " ...as a result of the discussions that have taken place over the last several weeks an agreement has been arrived at on patroling arrangements along the line of actual control in the… pic.twitter.com/J7L9LEi5zv
— ANI (@ANI) October 21, 2024
2020ರಿಂದ ಭಾರತ ಮತ್ತು ಚೀನಾದ ಸೇನೆಗಳು ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತಿಗಾಗಿ ಸಂಘರ್ಷ ನಡೆಸಿದ್ದವು. ಜೂನ್ ತಿಂಗಳಲ್ಲಿ ಗಲ್ವಾನ್ ಕಣಿವೆಯಲ್ಲಿ ಭೀಕರ ಘರ್ಷಣೆಯೂ ನಡೆದಿತ್ತು. ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದು ಗಂಭೀರ ಮಿಲಿಟರಿ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿತ್ತು.
ಮೋದಿ ರಷ್ಯಾ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಕಜಾನ್ ನಗರಕ್ಕೆ ಅಕ್ಟೋಬರ್ 22ರಂದು ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ.
ಉಭಯ ರಾಷ್ಟ್ರಗಳ ನಡುವಿನ ಈ ಒಪ್ಪಂದದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳದಿದ್ದರೂ, ಬ್ರಿಕ್ಸ್ ಶೃಂಗದಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ನಡೆಯುವ ದ್ವಿಪಕ್ಷೀಯ ಸಭೆಯಲ್ಲಿ ಅಧಿಕೃತ ಪ್ರಕಟಣೆ ನಿರೀಕ್ಷಿಸಲಾಗಿದೆ.
ಚೀನಾದೊಂದಿಗೆ ಸುಮಾರು 75 ಪ್ರತಿಶತದಷ್ಟು ಸಮಸ್ಯೆಗಳು ಬಗೆಹರಿದಿವೆ. ಆದರೆ, ದೊಡ್ಡ ಸಮಸ್ಯೆಯೆಂದರೆ ಗಡಿಯಲ್ಲಿ ಹೆಚ್ಚುತ್ತಿರುವ ಮಿಲಿಟರೀಕರಣ. ಈ ಬಗ್ಗೆ ಮಾತುಕತೆಗಳು ಪ್ರಕ್ರಿಯೆಯಲ್ಲಿವೆ. ಬಿಕ್ಕಟ್ಟು ಪರಿಹರಿಸಿಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ: 10 ಕೋಟಿ ಸದಸ್ಯತ್ವ ದಾಖಲಿಸಿದ ಬಿಜೆಪಿ, ವರ್ಷಾಂತ್ಯದಲ್ಲಿ 11 ಕೋಟಿ ದಾಟುವ ಗುರಿ