ಸುಕ್ಮಾ (ಛತ್ತೀಸ್‌ಗಢ): ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಕ್ಸಲರಿಗೆ ಸೇರಿದ ನಕಲಿ ನೋಟುಗಳ ಮತ್ತು ಅವುಗಳನ್ನು ಮುದ್ರಿಸಲು ಬಳಸಿದ ಉಪಕರಣಗಳನ್ನು ವಶಪಡಿಸಿಕೊಂಡಿವೆ. ಇದೇ ಮೊದಲ ಬಾರಿಗೆ ನಕ್ಸಲರ ಬಳಿ ನಕಲಿ ನೋಟುಗಳ ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಕ್ಸಲರು ಬಹುಕಾಲದಿಂದ ಬಸ್ತಾರ್ ಪ್ರದೇಶಗಳಲ್ಲಿ ವಾರದ ಮಾರುಕಟ್ಟೆಗಳಲ್ಲಿ ನಕಲಿ ನೋಟುಗಳನ್ನು ಬಳಸುತ್ತಿದ್ದರು. ಇದೇ ನೋಟುಗಳನ್ನು ಬಳಸಿ ಅಮಾಯಕ ಆದಿವಾಸಿಗಳನ್ನು ವಂಚಿಸುತ್ತಿದ್ದರು. ನಕ್ಸಲರು ಈ ಮೂಲದ ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಜಿ.ಚಹ್ವಾನ್ ಹೇಳಿದರು.
ಜಿಲ್ಲೆಯ ಕೊರಾಜಗುಡ ಗ್ರಾಮದ ಬಳಿಯ ಅರಣ್ಯದ ಗುಡ್ಡದ ಮೇಲೆ ಶನಿವಾರ ಸಂಜೆ ವಿವಿಧ ಪಡೆಗಳ ಭದ್ರತಾ ಸಿಬ್ಬಂದಿಯ ಜಂಟಿ ತಂಡ ಶೋಧ ಕಾರ್ಯಾಚರಣೆ ನಡೆಸಿದಾಗ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನಕ್ಸಲರ ಭೀತಿ ಎದುರಿಸುತ್ತಿರುವ ರಾಜ್ಯದಲ್ಲಿ ಮೊದಲ ಬಾರಿಗೆ ನಕ್ಸಲರಿಗೆ ಸೇರಿದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಯಶಸ್ಸು ಎಂದು ವಿವರಿಸಿದರು.
ಸುಕ್ಮಾದ ದಾಂತೇಶಪುರಂ, ಕೊರಾಜಗುಡ, ಮೈಲಾಸೂರು ಪ್ರದೇಶಗಳಲ್ಲಿ ನಕ್ಸಲರ ಕೊಂಟಾ ಪ್ರದೇಶ ಸಮಿತಿಯು ನಕಲಿ ನೋಟು ಮುದ್ರಣದಲ್ಲಿ ತೊಡಗಿದೆ ಎಂಬ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ 50ನೇ ಬೆಟಾಲಿಯನ್, ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ಬಸ್ತಾರ್ ಫೈಟರ್ಸ್ ಮತ್ತು ಜಿಲ್ಲಾ ಪಡೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.
ಕೊರಾಜಗುಡ ಬಳಿ ಭದ್ರತಾ ಸಿಬ್ಬಂದಿಯನ್ನು ಗಮನಿಸಿದ ನಕ್ಸಲರು ತಮ್ಮ ವಸ್ತುಗಳನ್ನು ಬಿಟ್ಟು ದಟ್ಟ ಅರಣ್ಯಕ್ಕೆ ಪರಾರಿಯಾಗಿದ್ದಾರೆ. ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಶೋಧಿದಾಗ 50, 100, 200 ಮತ್ತು 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು, ಬಣ್ಣದ ಮುದ್ರಣ ಯಂತ್ರ, ಪ್ರಿಂಟರ್, ಇನ್ವರ್ಟರ್ ಯಂತ್ರ, 200 ಶಾಯಿ ಬಾಟಲಿಗಳು, ಪ್ರಿಂಟರ್ ಯಂತ್ರದ ನಾಲ್ಕು ಕಾರ್ಟ್ರಿಡ್ಜ್‌ಗಳು, ಒಂಬತ್ತು ಪ್ರಿಂಟರ್ ರೋಲರ್‌ಗಳು, ಆರು ವೈರ್‌ಲೆಸ್ ಸೆಟ್‌ಗಳು, ಅದರ ಚಾರ್ಜರ್ ಮತ್ತು ಬ್ಯಾಟರಿಗಳು ಪತ್ತೆಯಾಗಿವೆ. ಜೊತೆಗೆ ಲೋಡಿಂಗ್ ಬಂದೂಕುಗಳು, ಅಪಾರ ಪ್ರಮಾಣದ ಸ್ಫೋಟಕಗಳು, ಇತರ ವಸ್ತುಗಳು ಮತ್ತು ನಕ್ಸಲ್ ಸಮವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ನಕ್ಸಲರು ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಮುದ್ರಿಸುವಲ್ಲಿ ತೊಡಗಿದ್ದರು. 2022ರಲ್ಲಿ ಪಶ್ಚಿಮ ಬಸ್ತಾರ್ ವಿಭಾಗದ ಪ್ರದೇಶದಲ್ಲಿನ ನಕ್ಸಲರು ತಮ್ಮ ಪ್ರದೇಶ ಸಮಿತಿಯ ಒಬ್ಬ ಅಥವಾ ಇಬ್ಬರಿಗೆ ನಕಲಿ ನೋಟುಗಳನ್ನು ಮುದ್ರಿಸುವ ತರಬೇತಿಯನ್ನು ನೀಡಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ವಾರದ ಮಾರುಕಟ್ಟೆಗಳಲ್ಲಿ ವಿವಿಧ ವಸ್ತುಗಳ ಖರೀದಿಗೆ ನಕಲಿ ನೋಟುಗಳನ್ನು ಬಳಸುತ್ತಿದ್ದರು. ಈ ಮೂಲಕ ಸ್ಥಳೀಯ ಬುಡಕಟ್ಟು ಮಾರಾಟಗಾರರನ್ನು ವಂಚಿಸುತ್ತಿದ್ದರು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ವಿವರಣೆ ನೀಡಿದರು.
ಇದನ್ನೂ ಓದಿ: ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ: ತನಿಖೆಗೆ ತೆರಳಿದ್ದ ಸಿಬಿಐ ತಂಡದ ಮೇಲೆಯೇ ಜನರ ದಾಳಿ