ಕೋಲ್ಕತಾ(ಪಶ್ಚಿಮ ಬಂಗಾಳ): ನೀವು ನಮ್ಮ ದೇಶದ ಭೂಮಿ ಆಕ್ರಮಿಸಿಕೊಳ್ಳಲು ಯತ್ನಿಸಿದರೆ ನಾವೇನು ಲಾಲಿಪಾಪ್ ತಿನ್ತಿರ್ತೀವಾ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಂಗ್ಲಾದೇಶದ ರಾಜಕಾರಣಿಗಳಿಗೆ ಸೋಮವಾರ ತಿರುಗೇಟು ಕೊಟ್ಟಿದ್ದಾರೆ. ಬಂಗಾಳ, ಬಿಹಾರ ಮತ್ತು ಒಡಿಶಾದ ಮೇಲೆ ಬಾಂಗ್ಲಾದೇಶ ಕಾನೂನುಬದ್ಧ ಅಧಿಕಾರ ಹಕ್ಕುಗಳಿವೆ ಎಂಬ ಬಾಂಗ್ಲಾದೇಶದ ಕೆಲ ರಾಜಕಾರಣಿಗಳ ಹೇಳಿಕೆಗೆ ಮಮತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಜನತೆ ಶಾಂತವಾಗಿರುವಂತೆ ಮತ್ತು ಬಾಂಗ್ಲಾದೇಶದ ರಾಜಕಾರಣಿಗಳ ಹೇಳಿಕೆಗಳಿಂದ ಪ್ರಚೋದಿತರಾಗದಂತೆ ಮನವಿ ಮಾಡಿದರು. ಅಲ್ಲದೆ ಕೇಂದ್ರವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಹೇಳಿದರು.
ಇತ್ತೀಚೆಗೆ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಕೆಲವು ಬಾಂಗ್ಲಾದೇಶದ ನಾಯಕರನ್ನು ಗೇಲಿ ಮಾಡಿದ ಅವರು, "ಶಾಂತವಾಗಿರಿ, ಆರೋಗ್ಯಕರವಾಗಿರಿ ಮತ್ತು ಮನಸ್ಸಿನ ಶಾಂತಿಯನ್ನು ಹೊಂದಿರಿ" ಎಂದು ಹೇಳಿದರು. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) ಇತ್ತೀಚೆಗೆ ಢಾಕಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಂಗಾಳ, ಬಿಹಾರ ಮತ್ತು ಒಡಿಶಾದ ಮೇಲೆ ದೇಶವು ಕಾನೂನುಬದ್ಧ ಅಧಿಕಾರ ಹೊಂದಿದೆ" ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿನ ಕೆಲವರ ಪ್ರಚೋದನಕಾರಿ ಹೇಳಿಕೆಗಳಿಂದ ಪ್ರಭಾವಿತರಾಗದಂತೆ ಮತ್ತು ಶಾಂತವಾಗಿರುವಂತೆ ಪಶ್ಚಿಮ ಬಂಗಾಳದ ಜನರಿಗೆ ಮನವಿ ಮಾಡಿದ ಅವರು, ನಮ್ಮ ರಾಜ್ಯದಲ್ಲಿ ಇಮಾಮ್ಗಳು ಸಹ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿದ್ದಾರೆ ಎಂದು ಹೇಳಿದರು.
"ಹಿಂದೂಗಳು ಮತ್ತು ಮುಸ್ಲಿಮರು ಮತ್ತು ಇತರ ಎಲ್ಲಾ ಸಮುದಾಯಗಳ ರಕ್ತನಾಳಗಳಲ್ಲಿ ಹರಿಯುವ ರಕ್ತ ಒಂದೇ. ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಹಾಳಾಗದಂತೆ ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು" ಎಂದು ಅವರು ಹೇಳಿದರು.
"ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಗಳನ್ನು ಖಂಡಿಸಿ ಜಾತಿ, ಮತ ಅಥವಾ ಸಮುದಾಯವನ್ನು ಲೆಕ್ಕಿಸದೆ ಜನರು ಸಾಮೂಹಿಕ ಪ್ರತಿಭಟನೆ ನಡೆಸಿದ ದೇಶದ ಮೊದಲ ರಾಜ್ಯ ಪಶ್ಚಿಮ ಬಂಗಾಳ" ಎಂದು ಮುಖ್ಯಮಂತ್ರಿ ಮಮತಾ ಹೇಳಿದರು. ಅಶಾಂತಿ ಉಂಟು ಮಾಡುವಂಥ ಯಾವುದೇ ಹೇಳಿಕೆ ನೀಡದಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದ ಅವರು, ಬಾಂಗ್ಲಾದೇಶದ ಬಗ್ಗೆ ವರದಿ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಮಾಧ್ಯಮಗಳಿಗೆ ಅವರು ಕೋರಿದರು.
"ನಮ್ಮ ವಿದೇಶಾಂಗ ಕಾರ್ಯದರ್ಶಿ ಮಾತುಕತೆಗಾಗಿ ಬಾಂಗ್ಲಾದೇಶದಲ್ಲಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದು ಬೇಡ. ಫಲಿತಾಂಶಕ್ಕಾಗಿ ಕಾಯೋಣ. ನಾವು ಜವಾಬ್ದಾರಿಯುತ ನಾಗರಿಕರು. ನಮ್ಮ ದೇಶ ಒಗ್ಗಟ್ಟಾಗಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಪಾನೀಯದೊಂದಿಗೆ ರಾಸಾಯನಿಕ ಬೆರಸಿ 12 ಜನರ ಕೊಲೆ ಮಾಡಿದ್ದ ಮಾಟಗಾರ, ಪೊಲೀಸ್ ಕಸ್ಟಡಿಯಲ್ಲಿ ಸಾವು