ಶಿಮ್ಲಾ (ಹಿಮಾಚಲಪ್ರದೇಶ): ಉಚಿತ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಹಿಮಾಚಲಪ್ರದೇಶ ಕಾಂಗ್ರೆಸ್ ಸರ್ಕಾರ ವಿದ್ಯುತ್ ಮೇಲೆ ಹಾಲಿನ ಸೆಸ್ ಮತ್ತು ಪರಿಸರ ಸೆಸ್ ವಿಧಿಸುವ ಮಸೂದೆ ಅಂಗೀಕರಿಸಿದೆ. ಇದಕ್ಕೆ ವಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಹೊಸ ನಿಯಮದ ಪ್ರಕಾರ ಜನರು, ವಿದ್ಯುತ್ ಮೇಲಿನ ಪ್ರತಿ ಯೂನಿಟ್‌ಗೆ 10 ಪೈಸೆ ಹಾಲಿನ ಸೆಸ್ ನೀಡಿದರೆ, ಕೈಗಾರಿಕಾ ಸಂಸ್ಥೆಗಳು ಪ್ರತಿ ಯೂನಿಟ್‌ಗೆ 2 ಪೈಸೆಯಿಂದ 6 ರೂಪಾಯಿವರೆಗೆ ಪರಿಸರ ಸೆಸ್ ಪಾವತಿಸಬೇಕಿದೆ. ಇದು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತದೆ ಎಂದು ವಿಪಕ್ಷಗಳು ಆರೋಪಿಸಿವೆ.
ಗೃಹ ಬಳಕೆದಾರರಿಂದ ಹಾಲಿನ ಸೆಸ್: ತಿದ್ದುಪಡಿ ಮಸೂದೆ ಅನುಸಾರ, ಗೃಹ ವಿದ್ಯುತ್ ಬಳಕೆದಾರರು ಪ್ರತಿ ಯೂನಿಟ್‌ಗೆ 10 ಪೈಸೆ ಹಾಲಿನ ಸೆಸ್ ಪಾವತಿಸಬೇಕಾಗುತ್ತದೆ. ಇದರರ್ಥ, ಪ್ರತಿ ಯೂನಿಟ್ ವಿದ್ಯುತ್ ಗೃಹಬಳಕೆದಾರರಿಗೆ 10 ಪೈಸೆಗಳಷ್ಟು ಹೆಚ್ಚುವರಿ ಹಣ ಪಾವತಿ ಮಾಡಬೇಕು. ಆದರೆ, ಉಚಿತ ವಿದ್ಯುತ್ ಯೋಜನೆಯಡಿ ಬರುವ ಗ್ರಾಹಕರು ಈ ಸೆಸ್ ಪಾವತಿಸಬೇಕಾಗಿಲ್ಲ.
ಕೈಗಾರಿಕೆಗಳಿಂದ ಪರಿಸರ ಸೆಸ್: ರಾಜ್ಯದಲ್ಲಿನ ಕೈಗಾರಿಕೆಗಳಿಂದ ಪರಿಸರ ಸೆಸ್ ಸಂಗ್ರಹಿಸಲು ತಿದ್ದುಪಡಿಯು ಅವಕಾಶ ಮಾಡಿಕೊಡುತ್ತದೆ. ಪ್ರತಿ ಯೂನಿಟ್‌ಗೆ 2 ಪೈಸೆಯಿಂದ 6 ರೂಪಾಯಿವರೆಗೆ ವಿಧಿಸಬಹುದಾಗಿದೆ. ಸಣ್ಣ ಕೈಗಾರಿಕಾ ಸಂಸ್ಥೆಗಳಿಗೆ ಪ್ರತಿ ಯೂನಿಟ್‌ಗೆ ಕನಿಷ್ಠ 2 ಪೈಸೆ ಸೆಸ್ ಇದ್ದರೆ, ಮಧ್ಯಮ ಕೈಗಾರಿಕೆಗಳಿಗೆ 4 ಪೈಸೆ, ದೊಡ್ಡ ಕೈಗಾರಿಕೆಗಳಿಗೆ 10 ಪೈಸೆ ಮತ್ತು ವಾಣಿಜ್ಯ ವಲಯದ ಸಂಸ್ಥೆಗಳಿಗೆ 10 ಪೈಸೆ ವಿಧಿಸಲಾಗುತ್ತದೆ.
ಇದಲ್ಲದೇ, ತಾತ್ಕಾಲಿಕ ಸಂಪರ್ಕಕ್ಕೆ ಹಾಗೂ ಸ್ಟೋನ್ ಕ್ರಷರ್‌ಗೆ ಪ್ರತಿ ಯೂನಿಟ್‌ಗೆ 2 ರೂಪಾಯಿ ಪರಿಸರ ಸೆಸ್ ವಿಧಿಸಲಾಗುವುದು. ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳ ಮೇಲೆ ಪ್ರತಿ ಯೂನಿಟ್‌ಗೆ ಗರಿಷ್ಠ ಪರಿಸರ ಸೆಸ್ ಆಗಿ 6 ರೂಪಾಯಿ ಇರಲಿದೆ. ಈ ಸೆಸ್‌ನಿಂದ ಸಂಗ್ರಹವಾಗುವ ಆದಾಯವನ್ನು ನವೀಕರಿಸಬಹುದಾದ ಇಂಧನದಿಂದ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಪರಿಸರವನ್ನು ರಕ್ಷಿಸಲು ಬಳಸಲಾಗುತ್ತದೆ.
ಮದ್ಯದ ಮೇಲೆ ಹಸುವಿನ ಸೆಸ್: ಹಿಮಾಚಲದಲ್ಲಿ ಮದ್ಯದ ಮೇಲೆ ಹಸು ಮತ್ತು ಹಾಲಿನ ಸೆಸ್ ಅನ್ನೂ ಸಂಗ್ರಹಿಸಲಾಗುತ್ತಿದೆ ಎಂಬುದು ಗಮನಾರ್ಹ ಸಂಗತಿ. ಹಿಂದಿನ ಬಿಜೆಪಿ ಸರ್ಕಾರ ಮದ್ಯದ ಮೇಲೆ ಹಸುವಿನ ಸೆಸ್ ಆಗಿ ಶೇಕಡಾ 2.5 ರಷ್ಟು ವಿಧಿಸಿತ್ತು. ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಮದ್ಯದ ಬಾಟಲಿಗಳ ಮೇಲೆ ಹಾಲಿನ ಸೆಸ್ ವಿಧಿಸಿತ್ತು. ಪ್ರತಿ ಮದ್ಯದ ಬಾಟಲಿಯ ಮೇಲೆ 10 ರೂಪಾಯಿ ಹಾಲಿನ ಸೆಸ್ ವಿಧಿಸಲಾಗುತ್ತದೆ.
ಇದನ್ನೂ ಓದಿ: ಕೇದಾರನಾಥದಲ್ಲಿ ಭೂಕುಸಿತ: ಐವರು ಯಾತ್ರಾರ್ಥಿಗಳ ಸಾವು, ಮೂವರಿಗೆ ಗಾಯ - landslide in kedarnath