ತಿರುವನಂತಪುರಂ: ಕೇರಳದಲ್ಲಿ ಪೂರ್ವ ಮುಂಗಾರು ಅಬ್ಬರ ಜೋರಾಗಿದ್ದು, ಕೊಚ್ಚಿ, ತ್ರಿಶೂರ್ ಸೇರಿದಂತೆ ಅನೇಕ ತಗ್ಗು ಪ್ರದೇಶಗಳು ಜಲಾವೃತ್ತವಾಗಿದೆ. ಪತ್ತನಂತಿಟ್ಟು, ಕೊಟ್ಟಾಯಂ ಮತ್ತು ಇಡುಕ್ಕಿ ಮೂರು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಮಳೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಕೆ ರಾಜನ್, ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 20 ಸೆ.ಮೀಗಿಂತ ಹೆಚ್ಚು ಮಳೆಯಾಗಿದೆ. ಮಳೆ ಘಟನೆಯಿಂದ ವಿವಿಧೆಡೆ 11 ಮಂದಿ ಸಾವನ್ನಪ್ಪಿದ್ದಾರೆ. 6 ಜನರು ಮಳೆನೀರಿಗೆ ಕೊಚ್ಚಿ ಹೋಗಿದ್ದರೆ, ಇಬ್ಬರು ನೀರು ತುಂಬಿದ ಕ್ವಾರಿಯಲ್ಲಿ, ಇಬ್ಬರು ಗುಡುಗು ಮಿಂಚಿಗೆ ಮತ್ತೆ ಒಬ್ಬರು ಗೋಡೆ ಕುಸಿತದಿಂದ ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೊಯಿಕ್ಕೋಡ್ ಜಿಲ್ಲೆಯ ಕುನ್ನಮಂಗಲಂನಲ್ಲಿ 22.62 ಸೆ.ಮೀ ಮಳೆಯಾಗಿದೆ. ಅಳಪ್ಪುಳದ ಚೆರ್ಥಲಾದಲ್ಲಿ 21.5 ಸೆ.ಮೀ ಮಳೆಯಾಗಿದೆ. ಕಡಿಮೆ ಅವಧಿಯಲ್ಲಿ ಬಿದ್ದ ಭಾರಿ ಮಳೆಯು ನಾನಾ ಅವಘಡಗಳು ಸಂಭವಿಸಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದಿದ್ದಾರೆ. ಯಾವುದೇ ಅಹಿತಕರ ಘಟನೆಗಳನ್ನು ಎದುರಿಸಲು ಸ್ಥಳೀಯ ಅಧಿಕಾರಿಗಳು, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಕಂದಾಯ ಇಲಾಖೆ ಸಿದ್ಧವಾಗಿದ್ದಾರೆ. ಎನ್‌ಡಿಆರ್‌ಎಫ್‌ನ ಎರಡು ತಂಡಗಳು ರಾಜ್ಯದಲ್ಲಿ ಪ್ರಸ್ತುತ ಸನ್ನದ್ದವಾಗಿದೆ.
ಈ ನಡುವೆ ಕೊಚ್ಚಿ ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತ್ತಗೊಂಡಿದ್ದು, ಪಾದಚಾರಿಗಳು ಮತ್ತು ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಲುವು ನಗರದಲ್ಲೂ ಕೂಡ ಇದೆ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದಾಗಿ ಕೃಷಿ ಭೂಮಿಗಳು ಕೂಡ ಹಾನಿಯಾಗಿದೆ. ಸಮುದ್ರದಲ್ಲಿ ಅಲೆಗಳು ತೀವ್ರತೆ ಹೆಚ್ಚಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ
ಮಳೆ ಅನಾಹುತದಿಂದ ಸದ್ಯ ರಾಜ್ಯದಲ್ಲಿ 223 ಜನರು ನಿರಾಶ್ರಿತರ ತಾಣದಲ್ಲಿ ಆಸರೆ ಪಡೆದಿದ್ದು, ರಾಜ್ಯದಲ್ಲಿ ಪ್ರಸ್ತುತ 8 ನಿರಾಶ್ರಿತ ಶಿಬಿರವನ್ನು ಸ್ಥಾಪಿಸಲಾಗಿದೆ. ಕೊಯಿಕ್ಕೋಡ್, ಮಲ್ಲಪುರಂ, ಎರ್ನಾಕುಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಭಾರೀ ಮಳೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ತಿರುವನಂತಪುರಂನ ಆರೋಗ್ಯ ಇಲಾಖೆಯಿಂದ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದ್ದು, ಯಾವುದೇ ರೀತಿಯ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಇರುವ ಹಿನ್ನಲೆ ಮುಂದಿನ ನಾಲ್ಕು ದಿನಗಳು ಕೂಡ ರಾಜ್ಯದಲ್ಲಿ ಮಳೆ ಮುಂದುವರೆಯುವ ಕುರಿತು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕೇರಳ ಕರಾವಳಿಯಲ್ಲಿ 468 ಪ್ರಬೇಧದ ಜೀವಿಗಳು ಪತ್ತೆ; ಗಮನ ಸೆಳೆದ ಹೊಸ 7 ಜಾತಿಯ ಸಮುದ್ರ ಮೀನುಗಳು