ಪಾಟ್ನಾ(ಬಿಹಾರ): ಬಿಹಾರದಲ್ಲಿ ರಣಬಿಸಿಲು ಜನರನ್ನು ಹೈರಾಣಾಗಿಸಿದೆ. ಬಿಸಿಲಿನ ತಾಪಕ್ಕೆ ಕಳೆದ 24 ಗಂಟೆಗಳಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಬ್ಬ ಎಎಸ್‌ಐ ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿ ಕೂಡ ಇದ್ದಾರೆ. ಅತಿಯಾದ ಉಷ್ಣಾಂಶದಿಂದಾಗಿ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ರಾಜ್ಯದಲ್ಲಿ ತೀವ್ರ ಬಿಸಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಕ್ಸರ್, ರೋಹ್ತಾಸ್, ಭೋಜ್ಪುರ, ನಳಂದಾದಲ್ಲಿ ತಲಾ ಮೂವರು, ಪಶ್ಚಿಮ ಚಂಪಾರಣ್‌ನಲ್ಲಿ ಇಬ್ಬರು, ಬೇಗುಸರಾಯ್, ಶೇಖ್‌ಪುರ, ಗೋಪಾಲ್‌ಗಂಜ್, ಔರಂಗಾಬಾದ್, ಅರ್ವಾಲ್‌ನಲ್ಲಿ ತಲಾ 1 ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಕ್ಸರ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಯುವಕನೊಬ್ಬನ ಮೃತದೇಹ ಇಲ್ಲಿನ ಸಿಕ್ರೌಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಬದಿಯಲ್ಲಿ ಪತ್ತೆಯಾಗಿದೆ. ಬಿಸಿಲಿನ ಬೇಗೆಗೆ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಬಿಎಂಪಿ ಜವಾನರೊಬ್ಬರು ಮೃತಪಟ್ಟಿದ್ದಾರೆ. ಇನ್ನೊಂದು ಸಾವು ಜಿಲ್ಲೆಯಲ್ಲಿ ಆಗಿದೆ.
ಕರ್ತವ್ಯದಲ್ಲಿದ್ದ ಎಎಸ್‌ಐ ಸಾವು: ರೋಹ್ತಾಸ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ರೋಹ್ತಾಸ್‌ನ ಡೆಹ್ರಿಯಲ್ಲಿ ಕರ್ತವ್ಯದ ವೇಳೆ ಇನ್ಸ್‌ಪೆಕ್ಟರ್ ದೇವನಾಥ್ ರಾಮ್ ಎಂಬುವವರು ಬಿಸಿಲ ಝಳಕ್ಕೆ ಮೃತಪಟ್ಟಿದ್ದಾರೆ. ಕಾರ್ಘರ್ ಬಧಾರಿ ಮಾರುಕಟ್ಟೆಯಲ್ಲಿ ಬಿಸಿಲಿಗೆ ವೃದ್ಧರೊಬ್ಬರು, ಸಸಾರಂ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಇನ್ನೂ, ಭೋಜ್‌ಪುರದಲ್ಲಿ ಗಜರಾಜ್‌ಗಂಜ್, ಬಾಧರಾ ಮತ್ತು ಜಗದೀಶ್‌ಪುರದಲ್ಲಿ ಬಿಸಿಲ ಶಾಖಕ್ಕೆ ಮೂರು ಸಾವುಗಳು ವರದಿಯಾಗಿವೆ. ನಳಂದಾದಲ್ಲಿ ಶಿಕ್ಷಕ, ಗೃಹ ರಕ್ಷಕ ದಳದ ಯೋಧ ಹಾಗೂ ರೈತ ಸಾವಿಗೀಡಾಗಿದ್ದಾರೆ. ಪಶ್ಚಿಮ ಚಂಪಾರಣ್‌ನಲ್ಲಿ ಬಿಸಿಗಾಳಿಗೆ 40 ವರ್ಷದ ವ್ಯಕ್ತಿ, 16 ವರ್ಷದ ಬಾಲಕ ಸಾವಿಗೀಡಾಗಿದ್ದಾರೆ. ಬೇಗುಸರಾಯ್, ಶೇಖ್‌ಪುರ, ಗೋಪಾಲ್‌ಗಂಜ್, ಔರಂಗಾಬಾದ್, ಅರ್ವಾಲ್‌ನಲ್ಲಿ ಪೊಲೀಸ್ ಸಿಬ್ಬಂದಿ, ಅಂಗನವಾಡಿ ಸಹಾಯಕಿ, ರೈತ ಪ್ರಾಣ ಕಳೆದುಕೊಂಡಿದ್ದಾರೆ.
ಕುಸಿದು ಬಿದ್ದ ಶಾಲಾ ಮಕ್ಕಳು: ಬಿಹಾರದಲ್ಲಿ ಬಿಸಿಲು ತೀವ್ರವಾಗಿದೆ. ಕೆಲವೆಡೆ 48 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚಿದೆ. ಬಿಸಿಲಿನ ತಾಪ ವಿಪರೀತವಾಗಿದ್ದರೂ, ಶಾಲೆಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿಲ್ಲ. ಇದರಿಂದಾಗಿ ಬುಧವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪೊಲೀಸರು, ಶಿಕ್ಷಕರ ಆರೋಗ್ಯದಲ್ಲೂ ವ್ಯತ್ಯಯ ಕಂಡುಬಂದಿದೆ. ಶಿಕ್ಷಣ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನರಲ್ಲಿ ಆಕ್ರೋಶ ಉಂಟು ಮಾಡಿದೆ.
ಇಲ್ಲಿನ ಬೇಗುಸರಾಯ್, ಜಮುಯಿ, ನಳಂದಾ, ಶೇಖ್‌ಪುರ, ಮೋತಿಹಾರಿ, ಮುಂಗೇರ್, ಬಂಕಾ, ಶಿವರ್ ಜಿಲ್ಲೆಗಳ 100ಕ್ಕೂ ಹೆಚ್ಚು ಮಕ್ಕಳು ಬಿಸಿಲಿನ ತಾಪಕ್ಕೆ ಶಾಲೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರ ಆರೋಗ್ಯ ಸುಧಾರಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಉತ್ತರ ಭಾರತದಲ್ಲಿ ರಣಬಿಸಿಲು: ದೆಹಲಿಯಲ್ಲಿ 52°C ದಾಖಲು, ಬಿಹಾರದ ಶಾಲೆಯಲ್ಲಿ ಝಳಕ್ಕೆ 100 ಮಕ್ಕಳು ನಿತ್ರಾಣ - heatwave