ETV Bharat / bharat

ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರ ಕಡೆಗಣನೆ: ಹೆಚ್.​ಡಿ.ದೇವೇಗೌಡ - H D Devegowda

author img

By ETV Bharat Karnataka Team

Published : Aug 5, 2024, 10:50 PM IST

ರಾಜ್ಯಸಭೆಯಲ್ಲಿಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ನವೀಕರಿಸಬಹುದಾದ ಇಂಧನ ಶಕ್ತಿಗಳ ಬಗ್ಗೆ ಮಾತನಾಡಿದರು. ಕರ್ನಾಟಕದಲ್ಲಿ ಈ ಕ್ಷೇತ್ರದ ಬೆಳವಣಿಗೆ ಪ್ರಮಾಣ ಶೇ. 2.58ರಷ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ
ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ (ಸಂಸದ್​ ಟಿವಿ)

ಬೆಂಗಳೂರು/ನವದೆಹಲಿ: ನವೀಕರಿಸಬಹುದಾದ ಇಂಧನ ಶಕ್ತಿಗಳ ಬಗ್ಗೆ ರಾಜ್ಯಸಭೆಯಲ್ಲಿ ಇಂದು ಭಾಷಣ ಮಾಡಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ಈ ಕ್ಷೇತ್ರವನ್ನು ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳು ಕಡೆಗಣಿಸುತ್ತಿದೆ ಎಂದರು.

ರಾಜ್ಯಸಭೆಯಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಹಿಂದೆ ಕರ್ನಾಟಕ ರಾಜ್ಯವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ನಾಯಕತ್ವ ನೀಡಿತ್ತು. ಈ ಕ್ಷೇತ್ರದಲ್ಲಿ ಗಣನೀಯ ದಾಪುಗಾಲು ಇರಿಸಿತ್ತು. ಆದರೆ ಕೆಲ ವರ್ಷಗಳಿಂದ ಈಚೆಗೆ ರಾಜ್ಯದಲ್ಲಿ ಈ ಕ್ಷೇತ್ರ ಗಣನೀಯವಾಗಿ ಹಿನ್ನಡೆ ಅನುಭವಿಸಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆ ಪ್ರಮಾಣ ಶೇ.14ರಷ್ಟಿದ್ದು, ಕರ್ನಾಟಕದಲ್ಲಿ ಆ ಪ್ರಮಾಣ ಶೇ. 2.58ರಷ್ಟಿದೆ. ಈ ಸಂದರ್ಭದಲ್ಲಿ ಈ ಕ್ಷೇತ್ರದ ಬೆಳವಣಿಗೆಯ ದರ ಕುಂಠಿತವಾಗಿರುವ ಬಗ್ಗೆ ಎಲ್ಲರೂ ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ಮಾಡಿದರು.

ಸೋಲಾರ್‌ ಪ್ಯಾನೆಲ್‌ಗಳನ್ನು 25 ವರ್ಷಗಳ ಬಳಿಕ ವಿಲೇವಾರಿ ಮಾಡಲೇಬೇಕಾಗುತ್ತದೆ. ಅವುಗಳನ್ನು ವಿಲೇವಾರಿ ಮಾಡುವ ಬಗ್ಗೆ ನಮ್ಮ ದೇಶದಲ್ಲಿ ಯಾವುದೇ ರೀತಿಯ ವೈಜ್ಞಾನಿಕ ನೀತಿ ಇರುವುಲ್ಲ. ಸೋಲಾರ್ ಪ್ಯಾನೆಲ್‌ಗಳ ವಿಲೇವಾರಿಯಲ್ಲಿ ನಾವು ಅತ್ಯಂತ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ, ಅವುಗಳ ವಿಲೇವಾರಿಗೆ ವೈಜ್ಞಾನಿಕ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಪರಿಸರ ಸಂರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನವೀಕರಿಸಬಹುದಾದ ಇಂಧನ ಶಕ್ತಿಯಿಂದ ನಮ್ಮ ಪರಿಸರ ಹಾಗೂ ಜೀವ ವೈವಿಧ್ಯದ ಮೇಲೆ ಉಂಟಾಗುವ ದುಷ್ಪರಿಣಾಮದ ಬಗ್ಗೆಯೂ ಅತ್ಯಂತ ಮುನ್ನೆಚ್ಚರಿಕೆ ವಹಿಸಬೇಕು. ಸೋಲಾರ್ ಪ್ಯಾನೆಲ್‌ಗಳನ್ನು ಇದೀಗ ಕೃಷಿ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ಇವುಗಳನ್ನು ಕೃಷಿ ಯೋಗ್ಯವಲ್ಲದ ಪ್ರದೇಶಗಳಲ್ಲಿ ಅಳವಡಿಸಲು ಯೋಜನೆಗಳನ್ನು ರೂಪಿಸಬೇಕೆನ್ನುವುದು ನನ್ನ ಕಳಕಳಿ ಎಂದು ಹೇಳಿದರು.

ಸಮಗ್ರ ನೀತಿ ರೂಪಿಸಬೇಕು: ಸದ್ಯದ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ನಾವು ಕೇವಲ ಇವನ್ನಷ್ಟೇ ಮಾಡಿದರೆ ಸಾಲದು. ಅವುಗಳ ಅಳವಡಿಕೆ, ಬಳಕೆ, ನಿರ್ವಹಣೆ ಪರಿಣಾಮಕಾರಿ ವ್ಯವಸ್ಥೆ ಅತ್ಯಗತ್ಯವಿದೆ. ಈ ಬಗ್ಗೆ ಸರ್ಕಾರ ಗಮನ ಕೊಡಬೇಕು. ನವೀಕರಿಸಬಹುದಾದ ಇಂಧನಕ್ಕೆ ಇನ್ನಷ್ಟು ಒತ್ತು ನೀಡಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಸಮಗ್ರ ನೀತಿ ರೂಪಿಸಬೇಕು ಎಂದು ಸಲಹೆ ನೀಡಿದರು.

ಹಸಿರು, ಶುದ್ಧ ಇಂಧನದ ಅಗತ್ಯವಿದೆ: ಪರಿಸರ ರಕ್ಷಣೆ ಮಾಡಿಕೊಂಡು ಹಸಿರು ಹಾಗೂ ಶುದ್ಧ ಇಂಧನದ ಬಳಕೆಯಿಂದ ದೇಶದ ಸುಸ್ಥಿರ ಅಭಿವೃದ್ಧಿಯಾಗಲು ಸಾಧ್ಯ. ಇದಕ್ಕೂ ಮುನ್ನ ಜಲ ವಿದ್ಯುತ್‌, ಆ ನಂತರ ಸೌರ ವಿದ್ಯುತ್, ಪವನ ವಿದ್ಯುತ್‌ ಶಕ್ತಿಗಳಿಗೆ ಪ್ರೋತ್ಸಾಹ ಕೊಡಲಾಯಿತು. ಸದ್ಯದ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಮಹತ್ವ ಕೊಡುವುದು ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಈಗ 1000 ಗಿಗಾವ್ಯಾಟ್‌ ಸೌರ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಈಚಿನ ವರ್ಷಗಳಲ್ಲಿ ಉತ್ಪಾದನೆ ಪ್ರಮಾಣ 30 ಪಟ್ಟು ಹೆಚ್ಚಳವಾಗಿದೆ. ಆದರೂ, ಇಂಧನ ಕ್ಷೇತ್ರದಲ್ಲಿ ಕೆಲವೊಂದು ಆತಂಕಗಳು ಇದ್ದೇ ಇದೆ ಎಂಬುದನ್ನು ನಾವು ಮರೆಯಬಾರದು ಎಂದು ತಿಳಿಸಿದರು.

ಇಂಧನ ಬಳಕೆಯಲ್ಲಿ ದೇಶ 3ನೇ ಸ್ಥಾನದಲ್ಲಿದೆ: ಇಡೀ ಜಗತ್ತಿನಲ್ಲಿಯೇ ಭಾರತವು ಇಂಧನ ಬಳಕೆಯಲ್ಲಿ 3ನೇ ಸ್ಥಾನದಲ್ಲಿದೆ. ಈಗಲೂ ಶೇ.80ರಷ್ಟು ಪಳೆಯುಳಿಕೆ ಇಂಧನಗಳನ್ನೇ ಬಳಸುತ್ತಿದ್ದೇವೆ. ನವೀಕರಿಸಬಹುದಾದ ಇಂಧನಗಳ ಪಾಲು ಶೇ.20ರಷ್ಟು ಮಾತ್ರ ಎಂದು ಟೆರಿ ವರದಿಯಲ್ಲಿ ಬೊಟ್ಟು ಮಾಡಿ ತೋರಿಸಲಾಗಿದೆ. 2050ರ ವೇಳೆಗೆ ಇಂಧನ ಬೇಡಿಕೆ ಪ್ರಮಾಣ ಶೇ. 400ರಷ್ಟು ಹೆಚ್ಚಳವಾಗಲಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಸಲದ ಬಜೆಟ್‌ನಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ವಿಶೇಷ ಒತ್ತಾಸೆ ನೀಡಲಾಗಿದೆ ಎಂದರು.

ಹಲವಾರು ರಾಜ್ಯಗಳು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿವೆ ಎಂಬುದು ಗಮನಾರ್ಹ. ಇನ್ನು ಕೆಲ ರಾಜ್ಯಗಳಲ್ಲಿ ಈ ಕ್ಷೇತ್ರದ ಪ್ರಗತಿ ಏನೇನೂ ಸಾಲದು ಎನ್ನುವುದು ನನ್ನ ಅಭಿಪ್ರಾಯ. ಇಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಲು ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದರು.

ಕೃಷಿ ಕ್ಷೇತ್ರದಲ್ಲಿ ರೈತರು ಅನುಭವಿಸುತ್ತಿರುವ ಕಷ್ಟಗಳ ಅರಿವು ನನಗಿದೆ. ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿದ್ದಾಗ ಕೃಷಿಕರ ಕಲ್ಯಾಣಕ್ಕೆ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಗಂಗಾ ಕಲ್ಯಾಣ ಯೋಜನೆಯನ್ನು ನಾನೇ ಜಾರಿ ಮಾಡಿದೆ ಎಂದು ಗೌಡರು ನೆನಪು ಮಾಡಿಕೊಂಡರು.

ಇದನ್ನೂ ಓದಿ: ವಕ್ಫ್​ ಮಂಡಳಿ ಕಾಯ್ದೆ ತಿದ್ದುಪಡಿಗೆ ಪರ-ವಿರೋಧ: ರಾಜ್ಯಸಭೆಯಲ್ಲಿ ಮೊದಲು ಮಂಡನೆ ಸಾಧ್ಯತೆ - Waqf Act Amendment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.