ಮುಂಬೈ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 11 ವರ್ಷದ ಬಾಲಕಿಯ 30 ವಾರದ ಭ್ರೂಣದ ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾ ಶರ್ಮಿಳಾ ದೇಶ್ಮುಖ್ ಮತ್ತು ಜಿತೇಂದ್ರ ಜೈನ್ ಅವರನ್ನೊಳಗೊಂಡ ರಜಾಪೀಠ ಈ ಆದೇಶ ನೀಡಿದೆ. ಜೆಜೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪ್ರಾಪ್ತೆಯ ಗರ್ಭಪಾತ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ.
ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಅಪ್ರಾಪ್ತೆಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಗರ್ಭಪಾತ ಕಾಯ್ದೆ ಅಡಿಯಲ್ಲಿ ಗರ್ಭಿಣಿ 20 ವಾರಗಳ ಅವಧಿ ನಂತರದಲ್ಲಿ ಭ್ರೂಣದ ಗರ್ಭಪಾತ ನಡೆಸಲು ಕೋರ್ಟ್ ಅನುಮತಿ ಕಡ್ಡಾಯವಾಗಿದೆ.
ಅರ್ಜಿಯ ಪ್ರಕಾರ, ಬಾಲಕಿ ಅಪರಿಚಿತ ಯುವಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಈ ಸಂಬಂಧ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಸಂವಿಧಾನದಲ್ಲಿ ಗರ್ಭಪಾತ ಕಾಯ್ದೆ ಅಡಿ 20 ವಾರಗಳ ನಂತರದಲ್ಲಿ ಕೇವಲ ಆಕಸ್ಮಿಕ ಗರ್ಭಾವಸ್ಥೆಗಳಲ್ಲಿ ಮಾತ್ರ ಕೋರ್ಟ್ ಗಡುವು ಮೀರಿದ ಅವಧಿಯ ಗರ್ಭಪಾತಕ್ಕೆ ಅವಕಾಶ ನೀಡುತ್ತದೆ. ಗರ್ಭಪಾತಕ್ಕೆ ಅನುಮತಿ ನೀಡುವಂತೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆ ಅರ್ಜಿ ಸಲ್ಲಿಸಿದ್ದಳು. ಈ ಹಿನ್ನೆಲೆ ವೈದ್ಯಕೀಯ ಗರ್ಭಪಾತಕ್ಕೆ ಕೋರ್ಟ್ ಅನುಮತಿ ನೀಡಿದೆ.
ಇದೇ ವೇಳೆ ಡಿಎನ್ಎ ಸಂರಕ್ಷಣೆ ಅಥವಾ ಮುಂದಿನ ಪ್ರಕರಣದ ವಿಚಾರಣೆಗೆ ಅಗತ್ಯವಿದ್ದಲ್ಲಿ ಭ್ರೂಣದ ರಕ್ತ ಮತ್ತು ಅಂಗಾಂಶಗಳ ಮಾದರಿಗಳನ್ನು ಸಂಗ್ರಹಿಸುವಂತೆಯೂ ಕೋರ್ಟ್ ಸೂಚನೆ ನೀಡಿದೆ.
30 ವಾರಗಳ ಗರ್ಭ ಎಂದರೆ 7 ತಿಂಗಳು ಭರ್ತಿಯಾಗಿರುವ ಹಿನ್ನೆಲೆ ಗರ್ಭಪಾತದ ಸಂದರ್ಭದಲ್ಲಿ ಒಂದು ವೇಳೆ ಮಗು ಬದುಕಿದಲ್ಲಿ, ಅದರ ಜೀವ ರಕ್ಷಣೆಗೆ ಅಗತ್ಯವಾದ ಎಲ್ಲಾ ವೈದ್ಯಕೀಯ ಸೌಲಭ್ಯವನ್ನು ನೀಡಬೇಕು. ಅದರ ಜವಾಬ್ದಾರಿಯನ್ನು ಅರ್ಜಿದಾರರು ಅಥವಾ ಆಕೆಯ ಪೋಷಕರು ತೆಗೆದುಕೊಳ್ಳುವಂತಿಲ್ಲ. ರಾಜ್ಯ ಸರ್ಕಾರವು ಮಗುವಿನ ಸಂಪೂರ್ಣ ಜವಾಬ್ದಾರಿ ಹೊರಲಿದೆ ಎಂದು ನ್ಯಾಯಪೀಠ ತಿಳಿಸಿತು.
ಇದನ್ನೂ ಓದಿ: ವ್ಯಕ್ತಿಯ ಪ್ರಾಣ ಉಳಿಸುವ ಭರದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಆರು ಜನರ ಸಾವು