ನವದೆಹಲಿ: ಹಳೆಯ ಕಾಶಿ ವಿಶ್ವನಾಥ ದೇಗುಲ ಎಂದೇ ಹೇಳಲಾಗುವ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಡೆಯುತ್ತಿರುವ ಪೂಜೆಯನ್ನು ತಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು. ಇದರಿಂದ ವ್ಯಾಸ್ ತೆಹಖಾನಾದಲ್ಲಿ ಸನಾತನ ಸಂಪ್ರದಾಯದ ಪೂಜಾ ವಿಧಿವಿಧಾನಗಳು ಸಾಂಗವಾಗಿ ಸಾಗಲಿವೆ.
ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅವಕಾಶ ನೀಡಿದ ಜಿಲ್ಲಾ ಕೋರ್ಟ್ನ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದರ ವಿರುದ್ಧ ಮುಸ್ಲಿಂ ಪಕ್ಷಗಾರರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಹೈಕೋರ್ಟ್ ಆದೇಶವನ್ನು ರದ್ದು ಮಾಡಲು ಕೋರಿದ್ದರು. ಆದರೆ, ಸುಪ್ರೀಂ ಕೋರ್ಟ್ ಪೂಜಾ ವಿಧಿವಿಧಾನಕ್ಕೆ ತಡೆ ನೀಡಲು ನಿರಾಕರಿಸಿದ್ದು, ಮಸೀದಿ ಸಮಿತಿಗೆ ದೊಡ್ಡ ಹಿನ್ನಡೆ ಉಂಟಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿ, ಹಿಂದೂ ಮತ್ತು ಮುಸ್ಲಿಂ ಕಡೆಯವರು ಜ್ಞಾನವಾಪಿ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತು. ಜತೆಗೆ ಸುಪ್ರೀಂ ಅನುಮತಿ ಇಲ್ಲದೇ ಅಲ್ಲಿ ನಡೆಯುತ್ತಿರುವ ಪೂಜಾ ವಿಧಾನಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ತಾಕೀತು ಮಾಡಿದೆ.
ಬೇರೆ ಜಾಗದಲ್ಲಿ ಪ್ರಾರ್ಥನೆ, ಪೂಜೆ: ಜ್ಞಾನವಾಪಿಯ ತೆಹಖಾನಾಗಳಲ್ಲಿನ ಪೂಜೆ ಮತ್ತು ಪ್ರಾರ್ಥನೆಗೆ ಬರುವ ದಾರಿಗಳು ಬೇರೆಯಾಗಿದ್ದನ್ನು ಗುರುತಿಸಿರುವ ಕೋರ್ಟ್, ಹಿಂದೂಗಳು ದಕ್ಷಿಣದಿಂದ ಪ್ರವೇಶಿಸಿದರೆ, ಮುಸ್ಲಿಮರು ಉತ್ತರ ಭಾಗದಿಂದ ಪ್ರಾರ್ಥನೆಗೆ ಬರುತ್ತಾರೆ. ಹೀಗಾಗಿ ಪೂಜೆ ಮತ್ತು ಪ್ರಾರ್ಥನೆಗೆ ಯಾವುದೇ ಅಡ್ಡಿ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಯಥಾಸ್ಥಿತಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಎರಡೂ ಸಮುದಾಯಗಳು ನಿಯಮಗಳನುಸಾರ ಧಾರ್ಮಿಕ ಆಚರಣೆ ಕೈಗೊಳ್ಳಬಹುದು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಮುಸ್ಲಿಮರು ಯಾವುದೇ ಅಡ್ಡಿಯಿಲ್ಲದೇ ಜ್ಞಾನವಾಪಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪೂಜೆಯು ಒಂದು ತೆಹಖಾನಾದಲ್ಲಿ ನಡೆಯುತ್ತಿದೆ. ಎರಡೂ ಸಮುದಾಯಗಳು ವಿರುದ್ಧ ದಿಕ್ಕಿನಲ್ಲಿರುವ ಪ್ರದೇಶದಲ್ಲಿ ಧಾರ್ಮಿಕ ಆಚರಣೆಗಳು ನಡೆಸುತ್ತಿವೆ. ಇದರ ಅನುಸಾರ 'ಯಥಾಸ್ಥಿತಿ'ಯಲ್ಲಿ ಯಾವುದೇ ಬದಲಾವಣೆ ಆಗಬಾರದು. ಉತ್ತರದಲ್ಲಿ ನಮಾಜ್ ಮತ್ತು ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜೆ ಮುಂದುವರಿಸಬಹುದು ಎಂದು ಕೋರ್ಟ್ ಹೇಳಿದೆ.
ಹೈಕೋರ್ಟ್ ಏನು ಹೇಳಿತ್ತು?: ಫೆಬ್ರವರಿ 26ರಂದು ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸುವ ಮುನ್ನ, ಜ್ಞಾನವಾಪಿ ಮಸೀದಿಯಲ್ಲಿ 1993ಕ್ಕೂ ಮೊದಲು ಪೂಜೆ ನಡೆಯುತ್ತಿತ್ತು. ಉತ್ತರ ಪ್ರದೇಶದ ಅಂದಿನ ಸರ್ಕಾರವು ಮೌಖಿಕ ಸೂಚನೆಯ ಮೇರೆಗೆ ವ್ಯಾಸ್ ತೆಹಖಾನಾದಲ್ಲಿ ಪೂಜಾ ವಿಧಿಗಳನ್ನು ನಿಲ್ಲಿಸಲಾಗಿದೆ. ಲಿಖಿತ ಆದೇಶವಿಲ್ಲದೆ ಕಾನೂನುಬಾಹಿರವಾಗಿ ಪೂಜಾ ವಿಧಿಗಳನ್ನು ತಡೆಯಲಾಗಿದೆ. ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಜನವರಿ 17ರ ಆದೇಶದಂತೆ ಅಲ್ಲಿ ಪೂಜೆ ಮುಂದುವರಿಸಬಹುದು. ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಇದು ಸಾಗಬಹುದು ಎಂದು ಆದೇಶಿಸಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸಿದ ಸಮೀಕ್ಷೆಯಲ್ಲಿ ಜ್ಞಾನವಾಪಿ ಮಸೀದಿ ಹಿಂದೆ ಕಾಶಿ ವಿಶ್ವನಾಥ ದೇಸ್ಥಾನದ ಭಾಗ ಎಂಬುದಕ್ಕೆ ನೂರಾರು ಸಾಕ್ಷ್ಯಗಳಿವೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿ, ಅಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಜ್ಞಾನವಾಪಿ: ಹಿಂದೂಗಳು ಪೂಜಿಸುತ್ತಿರುವ 'ವ್ಯಾಸ್ ಕಾ ತೆಹ್ಖಾನಾ' ಪ್ರದೇಶದ ದುರಸ್ತಿ, ರಕ್ಷಣೆ ಕೋರಿ ಕೋರ್ಟ್ಗೆ ಅರ್ಜಿ