ಗ್ವಾಲಿಯರ್, ಮಧ್ಯಪ್ರದೇಶ: ಗ್ವಾಲಿಯರ್ - ಝಾನ್ಸಿ - ಮಥುರಾ ನಡುವಣ ರೈಲು ಮಾರ್ಗಗಳ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಭಾರತೀಯ ರೈಲ್ವೆ ಇಲಾಖೆಯು ಹಳಿಗಳನ್ನು ಹಾಕುವುದರಿಂದ ಹಿಡಿದು ವಿದ್ಯುದ್ದೀಕರಣದವರೆಗಿನ ಕೆಲಸವನ್ನು ತ್ವರಿತಗತಿಯಲ್ಲಿ ನಿರ್ವಹಿಸುತ್ತಿದೆ. ಈ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಧ್ಯಪ್ರದೇಶದ ಗ್ವಾಲಿಯರ್ ಮೂಲಕ ಹಾದುಹೋಗುವ ಈ ಮೂರನೇ ರೈಲುಮಾರ್ಗವು ವಿಶೇಷವಾಗಿದೆ. ಏಕೆಂದರೆ ಭವಿಷ್ಯದಲ್ಲಿ ಈ ಟ್ರ್ಯಾಕ್‌ನಲ್ಲಿ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ರೈಲುಗಳನ್ನು ಓಡಿಸುವ ಚಿಂತನೆ ಭಾರತೀಯ ರೈಲ್ವೆಯದ್ದಾಗಿದೆ.
ವಿಶೇಷ ಟ್ರ್ಯಾಕ್ ನಿರ್ಮಾಣ: 266 ಕಿಮೀ ಉದ್ದದ ಟ್ರ್ಯಾಕ್ ಅನ್ನು ಝಾನ್ಸಿಯಿಂದ ಮಥುರಾವರೆಗೆ ಮೂರನೇ ಮಾರ್ಗವಾಗಿ ವಿಸ್ತರಿಸಲಾಗುತ್ತಿದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ - SAIL ನಿಂದ ವಿಶೇಷವಾಗಿ ಸಿದ್ಧಪಡಿಸಲಾದ R260 ಹಳಿಗಳನ್ನು ಈ ರೈಲು ಮಾರ್ಗಕ್ಕೆ ಬಳಸಲಾಗುತ್ತಿದೆ. ಏಕೆಂದರೆ ಇದು ರೈಲ್ವೆ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಎಲ್ಲಾ ಮಾನದಂಡಗಳನ್ನು ಪೂರೈಸಿದೆ. ಮೂರನೇ ಸಾಲಿನ ಕಾಮಗಾರಿಯನ್ನು ಅತಿ ಶೀಘ್ರವಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದ್ದು, ಇದಕ್ಕಾಗಿ ಝಾನ್ಸಿಯಿಂದ ದಾಟಿಯಾ ಹಾಗೂ ದಾಟಿಯಾದಿಂದ ದಬ್ರಾವರೆಗಿನ ಟ್ರ್ಯಾಕ್ ಸಂಪೂರ್ಣ ಸಿದ್ಧಗೊಂಡಿದೆ. ಜತೆಗೆ ಲೈನ್ ವಿದ್ಯುದ್ದೀಕರಣ ಕಾಮಗಾರಿಯೂ ಭರದಿಂದ ಸಾಗಿದೆ.
ಗ್ವಾಲಿಯರ್‌ನಲ್ಲಿ 160 kmph ವೇಗದ ರೈಲ್ವೆ ಟ್ರ್ಯಾಕ್: ಝಾನ್ಸಿ ರೈಲ್ವೇ ವಿಭಾಗದ PRO ಮನೋಜ್ ಸಿಂಗ್ ಅವರ ಪ್ರಕಾರ, "ಸದ್ಯ ದಬ್ರಾ ಮತ್ತು ಅಂತ್ರಿ ನಡುವಿನ ಕೆಲಸವು ಬಹುತೇಕ ಪೂರ್ಣಗೊಂಡಿದೆ. ಅಂತ್ರಿ ಮತ್ತು ಗ್ವಾಲಿಯರ್ ನಡುವಿನ ವಿಭಾಗದ ಕೆಲಸ ಮಾತ್ರ ಉಳಿದಿದೆ, ಏಕೆಂದರೆ ದೊಡ್ಡ ಯೋಜನೆಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಂತ್ರಿ ಮತ್ತು ಗ್ವಾಲಿಯರ್ ನಡುವೆ ಉಳಿದ ಕೆಲಸಗಳಿಗೂ ವೇಗ ಸಿಕ್ಕಿದೆ. ಒಂದರಿಂದ ಎರಡು ತಿಂಗಳಲ್ಲಿ ಈ ಕಾಮಗಾರಿಯೂ ಪೂರ್ಣಗೊಳ್ಳಲಿದ್ದು, ಗ್ವಾಲಿಯರ್‌ನಿಂದ ಮೊರೆನಾ, ಆಗ್ರಾ ಮತ್ತು ಮಥುರಾವರೆಗಿನ ಮೂರನೇ ಟ್ರ್ಯಾಕ್‌ನ ಕಾಮಗಾರಿ ಮುಗಿದ ಬಳಿಕ ವೇಗದ ರೈಲುಗಳನ್ನು ಓಡಿಸಲು ನಿರ್ಧರಿಸಿಲಾಗಿದೆ. ಭಾರತೀಯ ರೈಲ್ವೆ ಕೂಡ ಅತಿವೇಗವಾಗಿ ಕೆಲಸ ಮುಗಿಸುವ ನಿರೀಕ್ಷೆಯಿದೆ.
ಗ್ವಾಲಿಯರ್ ಮತ್ತು ಮಥುರಾ ನಡುವೆ ಹೊಸ ಹಳಿಯನ್ನು ಹಾಕುವ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವುದಕ್ಕಾಗಿ ಮೂರು ದಿನಗಳ ಹಿಂದೆಯೇ R260 ಹಳಿಗಳು ಗೂಡ್ಸ್ ರೈಲಿನಲ್ಲಿ ಗ್ವಾಲಿಯರ್ ರೈಲು ನಿಲ್ದಾಣವನ್ನು ತಲುಪಿದೆ. ಮುಂಬರುವ ಕೆಲವೇ ತಿಂಗಳುಗಳಲ್ಲಿ ದೇಶದ ಮೊದಲ ಹೈಸ್ಪೀಡ್ ವಂದೇ ಭಾರತ್ ಸ್ಲೀಪರ್ ರೈಲು, ದೆಹಲಿ ಮತ್ತು ಮುಂಬೈ ನಡುವೆ ಪ್ರಾರಂಭವಾಗಬಹುದು ಎಂದು ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ವಾಲಿಯರ್ ಮೂಲಕ ಹಾದು ಹೋಗುವ ಹೊಸ ಹಳಿಯಲ್ಲಿ ಈ ರೈಲನ್ನು ಓಡಿಸುವ ಎಲ್ಲ ಸಾಧ್ಯತೆಗಳಿದ್ದು, ಆರಂಭಿಕ ಹಂತದಲ್ಲಿ ಇದರ ವೇಗ ಗಂಟೆಗೆ 130 ಕಿ.ಮೀ ಆಗಿರುತ್ತದೆ, ಆದರೆ ನಂತರ ಅದನ್ನು ಗಂಟೆಗೆ 160 ರಿಂದ 220 ಕಿ.ಮೀ.ಗೆ ಹೆಚ್ಚಿಸಬಹುದು ಹೇಳಲಾಗುತ್ತಿದೆ.