ಶಹಜಹಾನ್‌ಪುರ(ಉತ್ತರ ಪ್ರದೇಶ): ಮೇ 25ರ ಶನಿವಾರ ಕರಾಳ ದಿನವಾಗಿವೆ. ಗುಜರಾತ್ ರಾಜ್ಕೋಟ್ನಲ್ಲಿನ ಗೇಮ್ಝೋನ್ನಲ್ಲಿ ಬೆಂಕಿ ಹೊತ್ತಿಕೊಂಡು 28 ಜನರು ಸುಟ್ಟು ಕರಕಲಾಗಿದ್ದರೆ, ದೆಹಲಿಯ ಬೇಬಿ ಕೇರ್ ಆಸ್ಪತ್ರೆಯಲ್ಲಿ ಬೆಂಕಿ ದುರಂತಕ್ಕೆ 6 ಮಕ್ಕಳು ಅಸುನೀಗಿದ್ದಾರೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಜಲ್ಲಿ ಕಲ್ಲು ತುಂಬಿದ್ದ ಲಾರಿ ರಭಸವಾಗಿ ಡಿಕ್ಕಿ ಹೊಡೆದು ಬಸ್ ಮೇಲೆ ಪಲ್ಟಿಯಾಗಿ 11 ಭಕ್ತರು ದುರಂತ ಸಾವು ಕಂಡ ಘಟನೆ ನಡೆದಿದೆ.
ಈ ಅವಘಡ ಶನಿವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ನಡೆದಿದೆ. ಖಾಸಗಿ ಬಸ್ನಲ್ಲಿ ಭಕ್ತರು ಸೀತಾಪುರದಿಂದ ಪೂರ್ಣಗಿರಿಗೆ ತೆರಳುತ್ತಿದ್ದರು. ಈ ವೇಳೆ ಊಟಕ್ಕೆಂದು ಢಾಬಾ ಬಳಿ ನಿಲ್ಲಿಸಿದ್ದಾಗ ಯಮನಂತೆ ಬಂದ ಲಾರಿ ಡಿಕ್ಕಿ ಹೊಡೆದು, 11 ಮಂದಿಯನ್ನು ಬಲಿ ಪಡೆದಿದೆ. ಘಟನೆಯಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಪೂರ್ಣ ವಿವರ: ಸೀತಾಪುರ ಜಿಲ್ಲೆಯ ಬರಜೆಥಾ ಗ್ರಾಮದ ನಿವಾಸಿಗಳು ಶನಿವಾರ ರಾತ್ರಿ ಪೂರ್ಣಗಿರಿ ಕ್ಷೇತ್ರಕ್ಕೆ ಖಾಸಗಿ ಬಸ್ನಲ್ಲಿ ಹೋಗುತ್ತಿದ್ದರು. ಶಹಜಹಾನ್‌ಪುರದ ಗೋಲಾ ಬೈಪಾಸ್ ರಸ್ತೆಯ ಡಾಬಾದ ಬಳಿ ಊಟಕ್ಕೆಂದು ಬಸ್ ನಿಲ್ಲಿಸಲಾಗಿದೆ. ಕೆಲವರು ಬಸ್ ಇಳಿದು ಡಾಬಾದೊಳಗೆ ಹೋಗಿದ್ದರು. ಇನ್ನು ಕೆಲವರು ಬಸ್ನೊಳಗೆ ಕುಳಿತಿದ್ದರು.
ಈ ವೇಳೆ ಜಲ್ಲಿ ಕಲ್ಲು ತುಂಬಿದ್ದ ಲಾರಿಯೊಂದು ವೇಗವಾಗಿ ಬಂದು ನಿಂತಿದ್ದ ಬಸ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಲ್ಲದೇ, ಬಸ್ ಮೇಲೆಯೇ ಬಿದ್ದಿದೆ. ಇದರಿಂದ ಜಲ್ಲಿಕಲ್ಲಿನೊಳಗೆ ಜನರು ಹೂತು ಹೋಗಿದ್ದಾರೆ. ಅಪಘಾತದ ನಂತರ ಕಿರುಚಾಟ ಕೇಳಿಬಂದಿದ್ದು, ಅಕ್ಕಪಕ್ಕದಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ.
ದುರಂತದ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು, ಕ್ರೇನ್ ಮತ್ತು ಬುಲ್ಡೋಜರ್ನಿಂದ ಪಲ್ಟಿಯಾದ ಲಾರಿಯನ್ನು ಬಸ್ನಿಂದ ಬೇರ್ಪಡಿಸಿದ್ದಾರೆ. ಆದರೆ, ಜಲ್ಲಿ ಕಲ್ಲಿನ ರಾಶಿಯಲ್ಲಿ ಹೂತಿದ್ದ 11 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುಮಾರು 3 ಗಂಟೆಗಳ ಕಾರ್ಯಾಚರಣೆಯ ಬಳಿಕ 10 ಮಂದಿಯನ್ನು ರಕ್ಷಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಉಮೇಶ್ ಪ್ರತಾಪ್ ಸಿಂಗ್, "ಅಪಘಾತದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪುಣ್ಯಕ್ಷೇತ್ರಕ್ಕೆ ಹೊರಟವರು ದಾರುಣ ಸಾವು ಕಂಡಿದ್ದಾರೆ. ಮೃತರ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ದೆಹಲಿಯ ಬೇಬಿಕೇರ್ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ: 6 ನವಜಾತ ಶಿಶುಗಳ ದಾರುಣ ಸಾವು - Fire In Baby Care Hospital