ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸರ್ಕಾರಿ ಆಸ್ಪತ್ರೆಗಳ ಆಂಬ್ಯುಲೆನ್ಸ್ ಮಾಫಿಯಾಕ್ಕೆ ತಡೆ ಇಲ್ಲವಾಗಿದೆ. ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ, ವೈದ್ಯರ ಕೊರತೆ ನಡುವೆ ಈ ಜೀವರಕ್ಷಕ ವಾಹನದ ದಂಧೆ ಕೂಡ ಜೋರಾಗಿದೆ. ಮಹಿಳೆ, ಮಕ್ಕಳು, ವೃದ್ಧರು ಎನ್ನದೇ ಹಣಕ್ಕಾಗಿ ಅದರ ಚಾಲಕರು ರಕ್ತಪಿಪಾಸುಗಳಾಗಿ ಬದಲಾಗುತ್ತಿದ್ದಾರೆ. ಇಂಥದ್ದೊಂದು ಘಟನೆ ಪಶ್ಚಿಮಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಆಸ್ಪತ್ರೆಯಲ್ಲಿ ಹೆರಿಗೆಯ ಬಳಿಕ ಮನೆಗೆ ವಾಪಸ್ ಕರೆತರಬೇಕಿದ್ದ ಆಂಬ್ಯುಲೆನ್ಸ್ ಚಾಲಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಕೇಳಿದಷ್ಟು ಹಣ ನೀಡಿಲ್ಲ ಎಂದು ನವಜಾತ ಶಿಶು, ತಾಯಿ ಮತ್ತು ಆಕೆಯ ಕುಟುಂಬವನ್ನು ನಡು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಅಲ್ಲಿನ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ.
ಘಟನೆಯ ವಿವರ: ಪೂರ್ವ ಬುರ್ದವಾನ್ ಜಿಲ್ಲೆಯ ಕತ್ವಾ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಧರಸೋನಾ ಗ್ರಾಮಕ್ಕೆ ಸೇರಿದ ಗರ್ಭಿಣಿಯೊಬ್ಬರು ಕತ್ವಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎರಡು ದಿನಗಳ ಬಳಿಕ ಅಂದರೆ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಕತ್ವಾ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು. ದಾರಿ ಮಧ್ಯೆ ಆಂಬ್ಯುಲೆನ್ಸ್ ಚಾಲಕ ಮನೆವರೆಗೂ ಬಿಡಲು ಹೆಚ್ಚುವರಿ ಹಣ ಕೇಳಿದ್ದಾನೆ. ತಮ್ಮಲ್ಲಿ ಕೊಡುವಷ್ಟು ಹಣ ಇಲ್ಲ ಎಂದು ನವಜಾತ ಶಿಶುವಿನ ತಾಯಿ ಮತ್ತು ಕುಟುಂಬ ಕೇಳಿಕೊಂಡರೂ, ಆತ ಗ್ರಾಮಕ್ಕೆ ತೆರಳದೆ ನಡುರಸ್ತೆಯಲ್ಲೇ ಎಲ್ಲರನ್ನು ಇಳಿಸಿ ಹೊರಟಿದ್ದಾನೆ.
ಸ್ಥಳೀಯ ವ್ಯಕ್ತಿಯೊಬ್ಬರು ಘಟನೆಯ ಬಗ್ಗೆ ಕತ್ವಾ ಆಸ್ಪತ್ರೆ ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಸ್ಪತ್ರೆಯ ಅಧೀಕ್ಷಕರು ಮತ್ತೊಂದು ಆಂಬ್ಯುಲೆನ್ಸ್ ಅನ್ನು ಕಳುಹಿಸಿ ಅದರಲ್ಲಿ ಬಾಣಂತಿ ಮತ್ತು ನವಜಾತ ಶಿಶುವನ್ನು ಮನೆಗೆ ಕರೆತರಲಾಗಿದೆ.
ದಾರಿಯಲ್ಲೇ ಬಿಟ್ಟು ಹೋದ: ಈ ಬಗ್ಗೆ ದೂರಿರುವ ಮಹಿಳೆ ಅಸ್ರೂಪಿ ಬೇಗಂ ಅವರು, ಆಂಬ್ಯುಲೆನ್ಸ್ ಚಾಲಕ ಆಸ್ಪತ್ರೆಯಿಂದ ಮನೆಗೆ ಕರೆತರುವಾಗ ಗ್ರಾಮದ ಮನೆವರೆಗೂ ಬಿಡಲು ನಿರಾಕರಿಸಿದ. ಬಳಿಕ ಹೆಚ್ಚುವರಿ ಹಣದ ಬೇಡಿಕೆ ಇಟ್ಟ. ಆದರೆ, ತಮ್ಮ ಬಳಿ ಕೇವಲ 50 ರೂಪಾಯಿ ಇದೆ ಎಂದು ಹೇಳಿದರೂ, ಕೇಳದ ಆತ ನಮ್ಮೆಲ್ಲರನ್ನು ರಸ್ತೆ ಮೇಲೆಯೆ ಬಿಟ್ಟುಹೋದ ಎಂದು ದೂರಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕತ್ವಾ ಆಸ್ಪತ್ರೆಯ ಅಧೀಕ್ಷಕ ಬಿಪ್ಲಬ್ ಮಂಡಲ್, "ಬಾಣಂತಿ, ನವಜಾತ ಶಿಶು ಮತ್ತು ಮಹಿಳೆಯನ್ನು ಮತ್ತೊಂದು ಆಂಬ್ಯುಲೆನ್ಸ್‌ನಲ್ಲಿ ಅವರ ಮನೆಗೆ ಕಳುಹಿಸಲಾಗಿದೆ. ಅವರನ್ನು ರಸ್ತೆಯಲ್ಲೇ ಬಿಟ್ಟ ಆಂಬ್ಯುಲೆನ್ಸ್ ಚಾಲಕನ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.