ಕೇಶೋರಾಯಪಟ್ಟಣ (ಬುಂಡಿ): ದೆಹಲಿ- ಮುಂಬೈ ರೈಲು ಮಾರ್ಗದಲ್ಲಿ ಗುರ್ಲಾ ರೈಲು ನಿಲ್ದಾಣದ ಬಳಿ ಮಂಗಳವಾರ ಸಂಜೆ ಗೂಡ್ಸ್ ರೈಲಿನ 3-4 ಬೋಗಿಗಳು ಹಳಿ ತಪ್ಪಿದ ಘಟನೆ ನಡೆದಿದೆ. ಹಳಿತಪ್ಪಿರುವ ಬೋಗಿಗಳನ್ನು ಮರುಸ್ಥಾಪಿಸುವ ಕೆಲಸ ಭರದಿಂದ ಸಾಗುತ್ತಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಜೊತೆಗೆ ಯಾವುದೇ ರೈಲು ಸಂಚಾರಕ್ಕೆ ಅಡ್ಡಿಯಾಗಿಲ್ಲ. ಮೊದಲಿನಂತೆಯೇ ರೈಲು ಸಂಚಾರ ಸುಗಮವಾಗಿದೆ.
ರೈಲ್ವೇ ಇಲಾಖೆ ಮಾಹಿತಿ ಪ್ರಕಾರ, ಗೂಡ್ಸ್ ರೈಲು ಕೋಟಾದಿಂದ ದೆಹಲಿಗೆ ಹೋಗುತ್ತಿತ್ತು. ಸಂಜೆ 5.15ಕ್ಕೆ ಗುರ್ಲಾ ರೈಲು ನಿಲ್ದಾಣದ ಬಳಿ ರೈಲು ಹಳಿ ತಪ್ಪಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜನ ಜಮಾಯಿಸಿದ್ದು, ಆರ್ಪಿಎಫ್ ಹಾಗೂ ಕೇಶೋರಾಯಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಜನರನ್ನು ನಿಭಾಯಿಸಿದರು. ಕೋಟಾದ ರೈಲ್ವೇ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳ ತಂಡ ಸ್ಥಳದಲ್ಲಿದ್ದು, ಬೋಗಿಗಳನ್ನು ಮರುಸ್ಥಾಪಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಅವಘಡದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ರೋಹಿತ್ ಮಾಳವೀಯ ಮಾತನಾಡಿ, "ಗೂಡ್ಸ್ ರೈಲು ಬೋಗಿಗಳನ್ನು ಮರುಸ್ಥಾಪಿಸುವ ಕೆಲಸ ನಡೆಯುತ್ತಿದೆ. ಅದು ಕಂಟೈನರ್ ಮಾದರಿಯ ಗೂಡ್ಸ್ ರೈಲು. ಅಪಘಾತ ನಡೆದ ಹಿನ್ನೆಲೆ ವಿಭಾಗದ ಹಿರಿಯ ಸುರಕ್ಷತಾ ಅಧಿಕಾರಿ ವಿನೋದ್ ಕುಮಾರ್ ಮೀನಾ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಗೂಡ್ಸ್ ರೈಲು ಗುರ್ಲಾದಲ್ಲಿ ಐದನೇ ಟ್ರ್ಯಾಕ್ನಲ್ಲಿತ್ತು. ಇದರಿಂದಾಗಿ ದೆಹಲಿ ಮುಂಬೈ ರೈಲು ಮಾರ್ಗದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ" ಎಂದು ತಿಳಿಸಿದರು.