ಗೊಂಡಾ (ಉತ್ತರಪ್ರದೇಶ): ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ನೈರ್ಮಲ್ಯ ಕಾರ್ಯಕರ್ತನೊಬ್ಬ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ. ಸ್ವೀಪರ್ ಆಗಿರುವ ಸಂತೋಷ್ ಜೈಸ್ವಾಲ್ ಹಲವು ಐಷಾರಾಮಿ ವಾಹನಗಳ ಮಾಲೀಕರಾಗಿದ್ದಾರೆ. ಸ್ಪೀಪರ್ ಸಂತೋಷ್ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತೋಷ್ ಜೈಸ್ವಾಲ್ ಮೊದಲು ಗೊಂಡಾ ಮುನ್ಸಿಪಾಲಿಟಿಯಲ್ಲಿ ನೈರ್ಮಲ್ಯ ಕಾರ್ಯಕರ್ತನಾಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಅವರಿಗೆ ಪ್ರಮುಖ ಕೆಲಸ ನೀಡಲಾಯಿತು. ಆಗ ನಜೀರ್ ಎಂಬ ಹುದ್ದೆಯಲ್ಲಿದ್ದುಕೊಂಡೇ ಸಂತೋಷ್ ಜೈಸ್ವಾಲ್ ಸರ್ಕಾರಿ ಕಡತಗಳನ್ನು ತಿದ್ದುವ ಮೂಲಕ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿ 9 ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ಕಡತಗಳನ್ನು ತಿದ್ದಿದ್ದಾರೆ ಎಂದು ಆರೋಪಿಸಿ ದೂರನ್ನು ಸ್ವೀಕರಿಸಿದ ನಂತರ ಅಂದಿನ ಕಮಿಷನರ್ ಯೋಗೇಶ್ವರ್ ರಾಮ್ ಮಿಶ್ರಾ ಅವರು ತನಿಖೆಯನ್ನು ನಡೆಸಿದ್ದರು ಮತ್ತು ತನಿಖೆಯಲ್ಲಿ ಬಹಿರಂಗವಾದ ನಂತರ ನೌಕರನನ್ನು ಅಮಾನತುಗೊಳಿಸಲಾಗಿದೆ. ಬಳಿಕ ಈತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಸದರ್ ತಹಶಿಲ್ದಾರ್ ದೇವೇಂದ್ರ ಯಾದವ್ ಅವರಿಗೂ ಆಸ್ತಿಗಳ ಪರಿಶೀಲನೆಗೆ ಸೂಚಿಸಲಾಗಿದೆ.
ದೇವಿಪಟ್ಟಣ ವಿಭಾಗದ ಆಯುಕ್ತರಾಗಿದ್ದ ಯೋಗೇಶ್ವರ್ ರಾಮ್ ಮಿಶ್ರಾ ಅವರ ಆದೇಶದ ಮೇರೆಗೆ ಸದರ್ ತಹಶಿಲ್ದಾರ್ ಅವರು ಐಷಾರಾಮಿ ವಾಹನಗಳ ಬಗ್ಗೆ ಮಾಹಿತಿ ನೀಡುವಂತೆ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿಗೆ ಪತ್ರ ಬರೆದಿದ್ದರು. ಹಾಲಿ ಆಯುಕ್ತ ದೇವಿ ಪಠಾಣ್, ಮಂಡಲ್ ಶಶಿಭೂಷಣ್ ಲಾಲ್ ಸುಶೀಲ್ ಅವರು ಅಧಿಕಾರ ವಹಿಸಿಕೊಂಡ ನಂತರ ವಾಹನಗಳ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿಗೆ ಸೂಚಿಸಲಾಯಿತು.
ವಾಹನಗಳ ಪರಿಶೀಲನೆ ಬಳಿಕ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿ ನೀಡಿದ ವರದಿಯಲ್ಲಿ ಆಘಾತಕಾರಿ ಅಂಶ ಬಯಲಾಗಿದೆ. ನೈರ್ಮಲ್ಯ ಕಾರ್ಮಿಕ ಒಂದೆರೆಡಲ್ಲ ಬರೋಬ್ಬರಿ 9 ಐಷಾರಾಮಿ ವಾಹನಗಳ ಮಾಲೀಕರಾಗಿದ್ದಾರೆ. ಈ ವಾಹನಗಳು ಅವನ ಮತ್ತು ಆತನ ಸಹೋದರ, ಹೆಂಡತಿಯ ಹೆಸರಿನಲ್ಲಿರುವುದು ಬೆಳಕಿಗೆ ಬಂದಿದೆ.
ಉದ್ಯೋಗಿ ಸಂತೋಷ್ ಜೈಸ್ವಾಲ್ ಅವರು ಸ್ವಿಫ್ಟ್ ಡಿಜೈರ್, ಎರ್ಟಿಗಾ ಮಾರುತಿ ಸುಜುಕಿ, ಮಹೀಂದ್ರಾ ಸ್ಕಾರ್ಪಿಯೋ, ಇನ್ನೋವಾ ಮತ್ತು ಮಹೀಂದ್ರಾ ಕ್ಸೈಲೋ ಹೊಂದಿದ್ದರೆ, ಎರ್ಟಿಗಾ ಮಾರುತಿ ಸುಜುಕಿಯನ್ನು ಸಹೋದರ ಉಮಾಶಂಕರ್ ಜೈಸ್ವಾಲ್ ಮತ್ತು ಅವರ ಪತ್ನಿ ಬೇಬಿ ಜೈಸ್ವಾಲ್ ಹೆಸರಿನಲ್ಲಿ ಟೊಯೋಟಾ ಇನ್ನೋವಾ ಖರೀದಿಸಲಾಗಿದೆ.
ಐಷಾರಾಮಿ ವಾಹನಗಳ ಮಾಲೀಕರು ಸ್ವೀಪರ್ ಆಗಿರುವುದರಿಂದ ಈಗ ಅವರ ಖಾತೆಯ ವಿವರವನ್ನೂ ಕೇಳಲಾಗಿದೆ. ಅಧಿಕಾರಿಗಳು ಬ್ಯಾಂಕ್‌ನಿಂದ ಕಳೆದ 5 ವರ್ಷಗಳ ದಾಖಲೆಗಳನ್ನು ಸಹ ಕೇಳಿದ್ದಾರೆ. ದಾಖಲೆ ದೊರೆತ ನಂತರ ಆರೋಪಿ ನೈರ್ಮಲ್ಯ ಕಾರ್ಯಕರ್ತ ಸಂತೋಷ್ ಕುಮಾರ್ ಜೈಸ್ವಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನೈರ್ಮಲ್ಯ ಕಾರ್ಯಕರ್ತ ಸಂತೋಷ್ ಕುಮಾರ್ ಜೈಸ್ವಾಲ್ ಅವರು ಆಯುಕ್ತರ ಕಚೇರಿಯಲ್ಲಿನ ಕಡತಗಳನ್ನು ತಪ್ಪಾಗಿ ದುರ್ಬಳಕೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಜಿ ಕಮಿಷನರ್ ಯೋಗೇಶ್ವರ್ ರಾಮ್ ಮಿಶ್ರಾ ಅವರು ಹೆಚ್ಚುವರಿ ಕಮಿಷನರ್ ಆಡಳಿತದಿಂದ ಸಂಪೂರ್ಣ ತನಿಖೆಯನ್ನು ಪಡೆದಿದ್ದಾರೆ. ತನಿಖೆಯ ಸಮಯದಲ್ಲಿ, ಕಮಿಷನರ್ ಕಚೇರಿಯಿಂದ ಅನೇಕ ಜನರು ನಾಪತ್ತೆಯಾಗಿರುವುದು ಕಂಡುಬಂದಿದೆ. ಹಲವು ಕಡತಗಳಲ್ಲಿ ಅಕ್ರಮ ನಡೆದಿರುವ ವಿಷಯವೂ ಬಹಿರಂಗವಾಗಿದೆ.
ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ವಾಹನಗಳ ವಿವರಗಳನ್ನು ಪಡೆದ ನಂತರ ಬ್ಯಾಂಕ್‌ಗಳ ದಾಖಲೆಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ.