ನವದೆಹಲಿ: ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಚಾಟಿ ಬೀಸಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ಅವರ ಚಿತ್ರವನ್ನು ಪೋಸ್ಟರ್‌ಗಳಲ್ಲಿ ಏಕೆ ಬಳಸಿದ್ದೀರಿ?, ನೀವು ನಿಮ್ಮ ಜನಪ್ರಿಯತೆಯ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದೀರಿ. ಸಾರ್ವಜನಿಕ ನಾಯಕರಾಗಿದ್ದೀರಿ. ನಿಮ್ಮ ಪೋಟೋದೊಂದಿಗೆ ಮುಂದುವರಿಯಿರಿ, ನೀವು ಏಕೆ ಅವರ (ಶರದ್ ಪವಾರ್) ಬೆನ್ನಿನ ಮೇಲೆ ಸವಾರಿ ಮಾಡುತ್ತಿದ್ದೀರಿ ಎಂದು ಸರ್ವೋಚ್ಛ ನ್ಯಾಯಾಲಯವು ಅಜಿತ್ ಪವಾರ್ ಬಣಕ್ಕೆ ಪ್ರಶ್ನೆ ಹಾಕಿದೆ.
ಕಳೆದ ವರ್ಷ ಜುಲೈನಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ವಿಭಜನೆಗೊಂಡಿತ್ತು. ಇದೇ ಫೆಬ್ರವರಿಯಲ್ಲಿ ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಘೋಷಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶರದ್ ಪವಾರ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಇಂದು ನ್ಯಾಯ ಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆ ವೇಳೆ ಶರದ್ ಪವಾರ್ ಬಣದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಅಜಿತ್ ಪವಾರ್ ಬಣವು ಶರದ್ ಪವಾರ್ ಹೆಸರು ಮತ್ತು ಫೋಟೋವನ್ನು ಬಳಸುತ್ತಿರುವ ಬಗ್ಗೆ ಗಮನಕ್ಕೆ ತಂದರು.
''ನಾನು ನನ್ನದೇ, ನನ್ನ ಹೆಸರು ಮತ್ತು ನನ್ನ ಚಿಹ್ನೆಯನ್ನು ಪಡೆದುಕೊಂಡಿದ್ದೇನೆ. ಅವರು (ಅಜಿತ್ ಪವಾರ್) ಗಡಿಯಾರ ಮತ್ತು ಕಹಳೆಯನ್ನು ಹೊರತುಪಡಿಸಿ ಏನಾದರೂ ಬಳಸಲಿ. ಜೊತೆಗೆ ನನ್ನ ಫೋಟೋವನ್ನಲ್ಲ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗಾಗಿ ಕ್ಷೇತ್ರ, ಪ್ರಜಾಪ್ರಭುತ್ವ ಮತ್ತು ಮೂಲ ರಚನೆ ಸಂವಿಧಾನದ ಪ್ರಕಾರ, ನೀವೇ ಮತಗಳನ್ನು ಪಡೆಯುವ ಧೈರ್ಯವಿದೆ. ಆದರೆ, ಏಕೆ ನೀವು ಬೆನ್ನು ಮತ್ತು ಹೆಗಲ ಮೇಲೆ ಸವಾರಿ ಮಾಡುತ್ತಿದ್ದೀರಿ'' ಎಂದು ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮಂಡಿಸಿದರು.
ಆಗ ನ್ಯಾಯ ಪೀಠವು, ''ಆ ಮಟ್ಟಿಗೆ ಅವರು (ಶರದ್ ಪವಾರ್ ಬಣದ ವಾದ) ಸರಿ. ನೀವು ಅವರ ಫೋಟೋವನ್ನು ಏಕೆ ಬಳಸುತ್ತಿದ್ದೀರಿ. ನಿಮ್ಮ ಜನಪ್ರಿಯತೆಯ ಬಗ್ಗೆ ನೀವು ತುಂಬಾ ವಿಶ್ವಾಸ ಹೊಂದಿದ್ದೀರಿ ಮತ್ತು ಸಾರ್ವಜನಿಕ ನಾಯಕರಾಗಿ ನಿಮ್ಮದೇ ಫೋಟೋದೊಂದಿಗೆ ಮುಂದುವರಿಯಿರಿ. ನೀವು ಅವರ (ಶರದ್ ಪವಾರ್) ಬೆನ್ನಿನ ಮೇಲೆ ಏಕೆ ಸವಾರಿ ಮಾಡುತ್ತಿದ್ದೀರಿ'' ಎಂದು ಅಜಿತ್ ಪವಾರ್ ಬಣದ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರಿಗೆ ಪ್ರಶ್ನಿಸಿತು.
ಇದಕ್ಕೆ ಮಣಿಂದರ್ ಸಿಂಗ್ ಮತ್ತು ಮತ್ತೊಬ್ಬ ವಕೀಲ ಅಭಿಕಲ್ಪ್ ಪ್ರತಾಪ್ ಸಿಂಗ್, ''ಇದನ್ನು ಮಾಡುತ್ತಿರುವುದು ಅಜಿತ್ ಪವಾರ್ ಪಕ್ಷದ ಒಂದು ಭಾಗವಲ್ಲ'' ಎಂದು ಹೇಳಿದರು. ಆಗ ನ್ಯಾಯಮೂರ್ತಿ ಕಾಂತ್, ''ನಾವು ಎಲ್ಲರನ್ನೂ ನಿರ್ಬಂಧಿಸಬೇಕೆಂದು ನೀವು ಬಯಸದ ಹೊರತು ಯಾರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಯಾವುದೇ ಕಾರ್ಯಕರ್ತನು ಅವರ (ಶರದ್ ಪವಾರ್) ಛಾಯಾಚಿತ್ರವನ್ನು ಬಳಸಲು ನೀವು ಅನುಮತಿಸುವುದಿಲ್ಲ ಎಂದು ನಮಗೆ ಭರವಸೆ ನೀಡಿ. ಇಲ್ಲದಿದ್ದರೆ ನಾವು ಆದೇಶವನ್ನು ರವಾನಿಸಲು ನಿರ್ಬಂಧವನ್ನು ಹೊಂದಿರುತ್ತೇವೆ'' ಎಂದು ಎಚ್ಚರಿಸಿದರು.
ಮುಂದುವರೆದು, ''ಈಗ ನೀವು ಎರಡು ಪ್ರತ್ಯೇಕ ಘಟಕಗಳಾಗಿದ್ದೀರಿ. ವಿಭಿನ್ನ ರೀತಿಯ ಗುರುತನ್ನು ಹೊಂದಿದ್ದೀರಿ. ನಿಮ್ಮ ಗುರುತಿನೊಂದಿಗೆ ಹೋಗಿ. ನೀವು ಅವರೊಂದಿಗೆ ಬೇರ್ಪಡಲು ಆಯ್ಕೆ ಮಾಡಿಕೊಂಡಿದ್ದೀರಿ. ನಿಮ್ಮ ಕಾರ್ಯಕರ್ತರನ್ನು ನಿಯಂತ್ರಿಸುವುದು ನಿಮ್ಮ ಕೆಲಸ. ಇದನ್ನು ಜನಸಾಮಾನ್ಯರಲ್ಲಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಎಂದು ಭಾವಿಸೋಣ. ಆದರೆ, ಚುನಾವಣೆ ಬಂದಾಗ ಶರದ್ ಪವಾರ್ ಅವರ ಹೆಸರು ಬೇಕು ಮತ್ತು ಮುಗಿದ ನಂತರ ನಿಮಗೆ ಅವರ (ಶರದ್ ಪವಾರ್) ಅಗತ್ಯವಿಲ್ಲ'' ಎಂದು ನ್ಯಾಯಮೂರ್ತಿ ಕಾಂತ್ ಚಾಟಿ ಬೀಸಿದರು.
ಅಲ್ಲದೇ, ''ಅಜಿತ್ ಪವಾರ್ ಗುಂಪು ಪ್ರತ್ಯೇಕ ರಾಜಕೀಯ ಗುರುತಾಗಿರುವುದರಿಂದ ಅದಕ್ಕೆ ಅಂಟಿಕೊಳ್ಳುವುದು ಉತ್ತಮವಲ್ಲ'' ಎಂದು ವಕೀಲ ಮಣಿಂದರ್ ಅವರಿಗೆ ಸೂಚಿಸಿದ ನ್ಯಾಯ ಪೀಠವು, ಶರದ್ ಪವಾರ್ ಬಣದ ಚಿತ್ರಗಳನ್ನು ಲೋಕಸಭೆ ಅಥವಾ ವಿಧಾನಸಭೆಯ ಸಮಯದಲ್ಲಿ ಪ್ರಚಾರ ಸಾಮಗ್ರಿಗಳಲ್ಲಿ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ತಾಕೀತು ಮಾಡಿತು. ಆದರೆ, ನ್ಯಾಯ ಪೀಠದ ಈ ಸಲಹೆಗೆ ವಕೀಲ ಸಿಂಗ್ ಒಪ್ಪಲಿಲ್ಲ. ಅದಕ್ಕೆ ಸಂಬಂಧಿಸಿದ ವಿವಿಧ ಸಂಭವನೀಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.
ಈ ವೇಳೆ, ''ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ, ಗಡಿಯಾರದ ಚಿಹ್ನೆ ಹಂಚಿಕೆ ಮಾಡುವ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ತನ್ನ ಅಭಿಪ್ರಾಯವನ್ನು ಇನ್ನೂ ರೂಪಿಸಿಲ್ಲ'' ಎಂದು ಸುಪ್ರೀಂ ಕೋರ್ಟ್ ತಿಳಿಸಿತು. ಮತ್ತೊಂದೆಡೆ, ವಿಚಾರಣೆಯ ಸಂದರ್ಭದಲ್ಲಿ ವಕೀಲ ಅಭಿಷೇಕ್ ಮನು ಸಿಂಘ್ವಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರದ ಸಮಯದಲ್ಲಿ ಶರದ್ ಪವಾರ್ ಅವರ ಚಿತ್ರಗಳನ್ನು ಬಳಸುವುದರ ಕುರಿತು ಅಜಿತ್ ಪವಾರ್ ಬಣದ ನಾಯಕ ಛಗನ್ ಭುಜಬಲ್ ಹೇಳಿಕೆ ಉಲ್ಲೇಖಿಸಿ, ''ಇದು ಘೋರ ಮೋಸ. ಗೊಂದಲಕ್ಕೀಡಾಗಲು ಬಯಸಲಾಗುತ್ತಿದೆ. ನೀವು ನಮ್ಮ ಹೆಸರು, ಫೋಟೋ ಮತ್ತು ಚಿಹ್ನೆಯನ್ನು ಬಳಸಬೇಡಿ'' ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಸಿಂಘ್ವಿ ಅವರ ಈ ವಾದಕ್ಕೆ ಮಣಿಂದರ್ ಸಿಂಗ್ ಮರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ನ್ಯಾಯಪೀಠವು ಎರಡೂ ಕಡೆಯ ವಾದವನ್ನು ಆಲಿಸುವುದಾಗಿ ಹೇಳಿತು. ಜೊತೆಗೆ ಇಂದಿನ ವಿಚಾರಣೆಯನ್ನು ಮುಕ್ತಾಯಗೊಳಿಸಿದ ಪೀಠವು, "ಇಬ್ಬರೂ ಕೂಡ ಇದು ನಿಮ್ಮ ಗುರುತಿನ ಕುರಿತು ಮರಾಠಿ ಸೇರಿ ಎಲ್ಲ ಪತ್ರಿಕೆಗಳಲ್ಲಿನ ಸಾರ್ವಜನಿಕ ಪ್ರಕಟಣೆಗಳೊಂದಿಗೆ ಬರಬೇಕು. ಅಲ್ಲದೇ, ಶನಿವಾರದೊಳಗೆ ಅಜಿತ್ ಪವಾರ್ ಬಣವು ತನ್ನ ಅಫಿಡವಿಟ್ ಸಲ್ಲಿಸಬೇಕೆಂದು ಸೂಚಿಸಿತು. ಮಾರ್ಚ್ 18ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: 'ಅಜಿತ್ ಪವಾರ್ ಬಣ ನಿಜವಾದ ಎನ್‌ಸಿಪಿ': ಇಸಿ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋದ ಶರದ್ ಪವಾರ್