ಲಖನೌ (ಉತ್ತರಪ್ರದೇಶ): ಪ್ರೇಯಸಿ ತನ್ನ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕ ಆಕೆಯನ್ನು ಕೊಲೆ ಮಾಡಿದ ಪ್ರಕರಣಗಳನ್ನು ನಾವು ನೋಡಿದ್ದೇವೆ. ಇಂಥಹದ್ದೇ ಪ್ರಕರಣದಲ್ಲಿ ಅದೆಷ್ಟೋ ಯುವಕರು ಜೈಲು ಪಾಲಾಗಿದ್ದೂ ಇದೆ. ಆದರೆ, ಇಲ್ಲೊಂದು ಕೇಸ್ ಮಾತ್ರ ವಿಭಿನ್ನವಾಗಿದೆ. ತನ್ನ ಪ್ರೀತಿ ಮತ್ತು ಮದುವೆಯಾಗಲು ನಿರಾಕರಿಸಿದ ಎಂದು ಯುವತಿಯೇ ತನ್ನ ಪ್ರಿಯಕರನ ಕತ್ತು ಸೀಳಿ ಕೊಲೆಗೆ ಯತ್ನಿಸಿದ್ದಾಳೆ.
ಈ ಪ್ರಕರಣ ಬೆಳಕಿಗೆ ಬಂದಿದ್ದು ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿ. ತೀವ್ರ ಗಾಯಗೊಂಡಿರುವ ಪ್ರೇಮಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ: ಸುಮಾರು ಒಂದೂವರೆ ವರ್ಷಗಳ ಹಿಂದೆ ಕೋಚಿಂಗ್ ಪಡೆಯುವ ವೇಳೆ ಲಖನೌದ ಅಂಕಿತ್ ಮತ್ತು ಸೀಮಾ (ಹೆಸರು ಬದಲಿಸಲಾಗಿದೆ) ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಕೂಡ ಒಬ್ಬರನ್ನೊಬ್ಬರು ಮದುವೆಯಾಗಲು ಬಯಸಿದ್ದರು. ಆದರೆ ಅಂಕಿತ್ ಅವರ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಅಂಕಿತ್ ತನ್ನ ಪ್ರೇಯಸಿಗೆ ಫೋನ್ ಮಾಡುವುದನ್ನು ನಿಲ್ಲಿಸಿದ್ದ. ಇದರಿಂದ ಸೀಮಾ ಕುಪಿತಗೊಂಡಿದ್ದಳು.
ಜೂನ್ 13 ರಂದು ಸೀಮಾ ಹೊಸ ನಂಬರ್‌ನಿಂದ ಅಂಕಿತ್‌ಗೆ ಕರೆ ಮಾಡಿ, ಕೊನೆಯ ಬಾರಿಗೆ ಭೇಟಿಯಾಗುವಂತೆ ಕೋರಿದ್ದಳು. ಇದಕ್ಕೆ ಅಂಕಿತ್ ಒಪ್ಪಿದ ಬಳಿಕ ಇಬ್ಬರೂ ರಾಜಧಾನಿಯಲ್ಲಿನ ವಾಟರ್ ಪಾರ್ಕ್‌ಗೆ ಹೋಗಿದ್ದರು. ಇಬ್ಬರೂ ವಾಟರ್ ಪಾರ್ಕ್‌ನಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಬಳಿಕ ಸೀಮಾಳನ್ನು ಮನೆಗೆ ಬಿಡಲು ಮುಂದಾದಾಗ, ಆಕೆ ಮನೆಯಲ್ಲಿ ಜಗಳವಾಗಿದೆ. ಇಂದು ನಾನು ಹೋಗಲ್ಲ ಎಂದು ಹೇಳಿದ್ದಾಳೆ.
ನಂತರ ಅಂಕಿತ್ ಸುಶಾಂತ್ ಗಾಲ್ಫ್ ಸಿಟಿಯ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿಯೇ ಉಳಿದುಕೊಂಡಿದ್ದರು. ರಾತ್ರಿ ಊಟದ ಬಳಿಕ ಇಬ್ಬರೂ ಕೊಠಡಿಯಲ್ಲಿದ್ದಾಗ, ಸೀಮಾ ಈ ಹಿಂದಿನಂತೆ ಅಂಕಿತ್ನ ಕೈಕಾಲು ಕಟ್ಟಿದ್ದಾಳೆ. ಇದು ಪ್ರೀತಿ ಇರಬೇಕು ಎಂದು ಅಂಕಿತ್ ನಂಬಿದ್ದ. ಬಳಿಕ ಆಕೆ ಎದೆಯ ಮೇಲೆ ಕುಳಿತು ಅಂಕಿತ್ ಕಪಾಳಕ್ಕೆ ಹೊಡೆಯಲು ಆರಂಭಿಸಿದ್ದಾಳೆ. ನನ್ನನ್ನು ಮದುವೆಯಾಗುತ್ತಿಯೋ, ಇಲ್ಲವೋ ಎಂದು ಪ್ರಶ್ನಿಸಿದ್ದಾಳೆ.
ಅಂಕಿತ್ ಕೊಸರಾಡಿ ಆಕೆಯನ್ನು ಬೆಡ್ ಮೇಲಿಂದ ಕೆಡವಿದ್ದಾನೆ. ಸಿಟ್ಟೆಗೆದ್ದ ಸೀಮಾ, ತನ್ನ ಬ್ಯಾಗ್‌ನಿಂದ ಹರಿತವಾದ ವಸ್ತುವಿನಿಂದ ಆತನ ಕುತ್ತಿಗೆಗೆ ಹಲವು ಬಾರಿ ಇರಿದಿದ್ದಾಳೆ. ರಕ್ತ ಚಿಮ್ಮುವುದನ್ನು ಕಂಡು ಆಕೆ ಅಲ್ಲಿಂದ ಓಡಿ ಹೋಗಿದ್ದಾಳೆ. ರೂಮಿನಲ್ಲಿ ಅಂಕಿತ್ ಕಿರುಚಾಟ ಕೇಳಿ ಸಿಬ್ಬಂದಿ ಓಡಿಬಂದು ಪರಿಶೀಲಿಸಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಹಿಂದೆಯೂ ಬೆದರಿಕೆ ಹಾಕಿದ್ದಳು: ಆಸ್ಪತ್ರೆಯಲ್ಲಿ ಅಂಕಿತ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸರಿಗೆ ಆತ ಘಟನೆಯನ್ನು ವಿವರಿಸಿದ್ದಾನೆ. ಅಂಕಿತ್ ಅವರ ತಾಯಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಸೀಮಾ ವಿರುದ್ಧ ದೂರು ನೀಡಿದ್ದಾರೆ. ಈ ಹಿಂದೆಯೂ ಸೀಮಾ ಕೊಲೆ ಬೆದರಿಕೆ ಹಾಕಿದ್ದಳು ಎಂದು ಅವರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಆರೋಪಿ ಸೀಮಾಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸೀಮಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ : ಸಿಎಂ ಸಿದ್ದರಾಮಯ್ಯ - CM Siddaramaiah