ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಹೊರಡಿಸಿದ ಘೋಷಣೆಯಾದ 'ಗರೀಬಿ ಹಠಾವೋ' ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಜುಮ್ಲಾ (ಸುಳ್ಳು) ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಸಂವಿಧಾನದ 75ನೇ ವಾರ್ಷಿಕೋತ್ಸವದ ಕುರಿತು ಲೋಕಸಭೆಯಲ್ಲಿ ಎರಡು ದಿನಗಳು ನಡೆದ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ ಅವರು, ಕೆಲವು ವಿರೋಧ ಪಕ್ಷಗಳಿಗೆ ಅದಾನಿ ಬಿಟ್ಟು ಬೇರೆ ವಿಷಯವೇ ಇಲ್ಲ. ಕಾಂಗ್ರೆಸ್ಗೆ ಹೊಂದಿಕೊಳ್ಳುವ ಮತ್ತು ಅದಕ್ಕೆ ಅತ್ಯಂತ ನೆಚ್ಚಿನ ಪದ ಒಂದಿದೆ. ಅದು ಜುಮ್ಲಾ. ಇದು ಇಲ್ಲದೆ ಆ ಪಕ್ಷದ ನಾಯಕರು ಬದುಕಲು ಸಾಧ್ಯವಿಲ್ಲ ಎಂದು ಛೇಡಿಸಿದರು.
ಗರೀಬಿ ಹಠಾವೋ ದೇಶ್ ಬಚಾವೋ (ಬಡತನ ತೊಡೆದುಹಾಕಿ, ದೇಶವನ್ನು ಉಳಿಸಿ) ಅನ್ನೋದ ಇಂದಿರಾ ಗಾಂಧಿ ಅವರು 1971 ರ ಚುನಾವಣಾ ಪ್ರಚಾರದಲ್ಲಿ ನೀಡಿದ ಘೋಷಣೆಯಾಗಿತ್ತು. ಆದರೆ ಈ ದೇಶಕ್ಕೆ ತಿಳಿದಿದೆ. ಕಾಂಗ್ರೆಸ್ ನಾಲ್ಕು ತಲೆಮಾರುಗಳಿಂದ ಬಳಸುತ್ತಿರುವ ಭಾರತದ ಅತಿದೊಡ್ಡ ಸುಳ್ಳು ಎಂದರೆ ಅದು, ಗರೀಬಿ ಹಠಾವೋ ಎಂದು ಮೋದಿ ಟೀಕಿಸಿದರು.
ಗರೀಬಿ ಹಠಾವೋ ಕಾಂಗ್ರೆಸ್ಗೆ ರಾಜಕೀಯವಾಗಿ ಸಹಾಯ ಮಾಡಿದೆ. ಆದರೆ, ಬಡವರಿಗೆ ಏನೊಂದೂ ಮಾಡಲಿಲ್ಲ. ಯುಪಿಎ ಸರ್ಕಾರ ಜನರಿಗೆ ಕನಿಷ್ಠ ಶೌಚಾಲಯ ನಿರ್ಮಿಸಿಕೊಟ್ಟಿರಲಿಲ್ಲ. ಆದರೆ, ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶೌಚಾಲಯಗಳನ್ನು ನಿರ್ಮಿಸುವ ಆಂದೋಲನವನ್ನು ಪ್ರಾರಂಭಿಸಿದೆ" ಎಂದು ಮೋದಿ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.
ಸಂವಿಧಾನ ಗಾಯಗೊಳಿಸಿ ರಕ್ತದ ರುಚಿ ನೋಡಿದ ಕಾಂಗ್ರೆಸ್: ಕಾಂಗ್ರೆಸ್ ಸಂವಿಧಾನವನ್ನು ಗಾಯಗೊಳಿಸಿದೆ. ರಕ್ತದ ರುಚಿಯನ್ನು ಕಂಡಿರುವ ಪಕ್ಷವು ಪದೆ ಪದೇ ಸಂವಿಧಾನವನ್ನು ಗಾಯಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ, ಬಿಜೆಪಿ ನೇತೃತ್ವದ ಎನ್ಡಿಎ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ಭಾರತದ ಶಕ್ತಿ ಮತ್ತು ಏಕತೆಯನ್ನು ಹೆಚ್ಚಿಸುವ ಕೆಲಸ ಮಾಡಿದೆ ಎಂದು ಮೋದಿ ಪ್ರತಿಪಾದಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ದೇಶದ ವೈವಿಧ್ಯತೆಯಲ್ಲಿ ವಿಷ ಬೀಜ ಬಿತ್ತಿದೆ. ಸಂವಿಧಾನಕ್ಕೆ ಹಿನ್ನಡೆ ಉಂಟು ಮಾಡಲು ಆ ಪಕ್ಷವು ಯಾವುದೇ ಅವಕಾಶವನ್ನು ತಪ್ಪಿಸಲ್ಲ ಎಂದು ಆರೋಪಿಸಿದರು. ನೆಹರೂ ಕುಟುಂಬವು ಪ್ರತಿ ಹಂತದಲ್ಲೂ ಸಂವಿಧಾನಕ್ಕೆ ಸವಾಲು ಹಾಕಿದೆ ಎಂದು ಮೋದಿ ದೂರಿದರು.
ಇದನ್ನೂ ಓದಿ: ಕೇವಲ 20 ರೂಪಾಯಿಯಲ್ಲಿ ಮದುವೆ; ಅಚ್ಚರಿ ಅನ್ನಿಸಿದರೂ ಸತ್ಯ!