ಕೋಲ್ಕತ್ತಾ( ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ಪರ ಮೃಧ ಧೋರಣೆ ತೋರಿದ ಕಾಂಗ್ರೆಸ್ ವಿರುದ್ಧ ಸಿಪಿಐಎಂ ಹಿರಿಯ ನಾಯಕ ಮೊಹಮ್ಮದ್ ಸಲೀಂ ವಾಗ್ದಾಳಿ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಅವರೇ ನಿತೀಶ್ ಕುಮಾರ್ ಅವರನ್ನು ಬಿಜೆಪಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಹಾರ - ಪಶ್ಚಿಮ ಬಂಗಾಳ ಗಡಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ವಾಹನದ ಮೇಲೆ ಟಿಎಂಸಿ ಬೆಂಬಲಿಗರು ದಾಳಿ ನಡೆಸಿದ್ದರು ಎಂದು ವರದಿಯಾಗಿತ್ತು. ಆದರೆ ಈ ಎಲ್ಲ ಆರೋಪಗಳನ್ನು ಮಮತಾ ಬ್ಯಾನರ್ಜಿ ತಿರಸ್ಕರಿಸಿದ್ದರು. ಮಮತಾ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ವಿಚಾರವನ್ನು ದೊಡ್ಡದು ಮಾಡಲು ಹೋಗಿರಲಿಲ್ಲ. ಈ ವಿಚಾರವಾಗಿ ಮಾತನಾಡಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ, ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದಾರೆ.
ಜೈ ರಾಂ ರಮೇಶ್ ಹೇಳಿಕೆ ಬಗ್ಗೆ ಗರಂ ಆದ ಸಲೀಂ 'ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ? ಇಲ್ಲಿಯವರೆಗೆ, ನಾವು 'ಜೈ ಶ್ರೀ ರಾಮ್' ಎಂಬ ಘೋಷಣೆಗಳನ್ನು ಕೇಳಿದ್ದೇವೆ. ಈಗ ಶ್ರೀ ತೆಗೆದು 'ದುರಾಸೆಯ ಜೈರಾಮ್' ಎಂದು ಹೇಳಬೇಕಾಗುತ್ತದೆ. ಬಂಗಾಳದ ಭವಿಷ್ಯವನ್ನು ಇಲ್ಲಿನ ಜನರೇ ನಿರ್ಧರಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ನಾನು ರಾಹುಲ್ ಗಾಂಧಿ ಅವರನ್ನು ಬಿರ್ಭೂಮ್‌ನಲ್ಲಿ ಭೇಟಿ ಮಾಡಿ ಅವರ ಯಾತ್ರೆಗೆ ಸ್ವಾಗತ ಕೋರಿದ್ದೇನೆ. ಅಸ್ಸೋಂನಲ್ಲಿ ಮಾಜಿ ಕಾಂಗ್ರೆಸಿಗರೂ ಆಗಿರುವ ಸಿಎಂ ಅವರು ಯಾತ್ರೆಗೆ ಒಡ್ಡಿರುವ ಅಡೆತಡೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಯಾತ್ರೆ ಅಡ್ಡಿಯಾಗಿರುವುದು ಹಾಗೂ ಈ ಅಡ್ಡಿ ಪುನರಾವರ್ತನೆ ಆಗಿರುವುದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಮಮತಾ ಬ್ಯಾನರ್ಜಿ ಅವರ ಸೋರಳಿಯನನ್ನು ಉಳಿಸಿಕೊಳ್ಳಲು ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಬಿಜೆಪಿಯ ಆದೇಶದ ಮೇರೆಗೆ ಕಾಂಗ್ರೆಸ್ ಯಾತ್ರೆಯ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದು ಸಲೀಂ ಆರೋಪಿಸಿದರು.
ಮಮತಾ ಬ್ಯಾನರ್ಜಿ ಅವರು ದೆಹಲಿ ಸಭೆಗೆ ಏಕೆ ಹಾಜರಾಗಲಿಲ್ಲ? ಇದು ಬಿಜೆಪಿ ವಿರುದ್ಧದ ವೇದಿಕೆಯಾಗಿದೆ. ಇತ್ತೀಚೆಗೆ ವರ್ಚುಯಲ್ ಸಭೆಗೆ ಹಾಜರಾಗದೇ ಬಂಗಾಳ ಸಿಎಂ, ಕಾಂಗ್ರೆಸ್ ಮತ್ತು ಸಿಪಿಐ (ಎಂ) ಅನ್ನು ವಿರೋಧಿಸಿದ್ದರು. ನಾವು ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟವರು, ಅವರಿಗೆ ಹೆಸರು ಮಾಡುವ ಗೀಳು ಹೆಚ್ಚು ಎಂದು ವಾಗ್ದಾಳಿ ನಡೆಸಿದರು.
ಸಹಜವಾಗಿಯೇ ಇಂಡಿಯಾ ಒಕ್ಕೂಟದ ಸಂಚಾಲಕರಾಗಿ ನಿತೀಶ್ ಕುಮಾರ್ ಇದ್ದರು. ಆದರೆ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೆಸರನ್ನು ಪ್ರಸ್ತಾಪಿಸಿದರು. ಈ ಮೂಲಕ ಅವರು ನಿತೀಶ್ ಕುಮಾರ್ ಅವರನ್ನು ಬಿಜೆಪಿಗೆ ಉಡುಗೊರೆಯಾಗಿ ನೀಡಿದರು. ಗುಜರಾತ್‌ಗೆ ನ್ಯಾನೋವನ್ನು ಉಡುಗೊರೆಯಾಗಿ ನೀಡಿದಂತೆಯೇ ನಿತೀಶ್ ಅವರನ್ನು ಬಿಜೆಪಿಗೆ ಉಡುಗೊರೆ ನೀಡಿದರು ಎಂದು ಮೊಹಮ್ಮದ್ ಸಲೀಂ ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ: ಜಾರ್ಖಂಡ್ ಸರ್ಕಾರವನ್ನ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ; ರಾಹುಲ್ ಗಾಂಧಿ