ಉದಯಪುರ: ಜಿಲ್ಲೆಯ ಕೊಟ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ವಿಷಪೂರಿತ ಆಹಾರ ಸೇವಿಸಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಸುಮಾರು 35ಕ್ಕೂ ಅಧಿಕ ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, 12 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಜರಾತಿಗೆ ಶಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರು ಊಟದೊಂದಿಗೆ ಸ್ಥಳೀಯ ಮದ್ಯ ಸೇವಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದಿಢೀರ್ ಇಷ್ಟೊಂದು ಜನ ಏಕಕಾಲಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಆರೋಗ್ಯ ಇಲಾಖೆಯೂ ಆತಂಕ ವ್ಯಕ್ತಪಡಿಸಿದೆ. ಸಚಿವ ಬಾಬುಲಾಲ್ ಖರಾಡಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.
ಸಾವನ್ ಕ್ಯಾರ ಗ್ರಾಮದ ಪುನಾ ಪರಗಿ ಎಂಬವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಕ್ಕಪಕ್ಕದ ಗ್ರಾಮದವರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಊಟದ ಬಳಿಕ ಕೆಲವರಲ್ಲಿ ವಾಂತಿ, ಅತಿಸಾರ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಡರಾತ್ರಿ ಇನ್ನೂ ಹೆಚ್ಚು ಜನರಲ್ಲಿ ವಾಂತಿ, ಅತಿಸಾರ ಕಾಣಿಸಿಕೊಂಡಿದೆ. ನಾಲ್ವರು ಮೃತಪಟ್ಟರು. 12 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಜರಾತಿಗೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಶೋಕ್ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದಿರುವ ಉದಯಪುರದ ಸಿಎಂಎಚ್ಒ ಮತ್ತು ಉದಯಪುರ ಜಿಲ್ಲಾಧಿಕಾರಿ ತನಿಖೆ ನಡೆಸುತ್ತಿದ್ದಾರೆ. ವೈದ್ಯರ ತಂಡ ಗ್ರಾಮದಲ್ಲಿ ಬೀಡುಬಿಟ್ಟಿದೆ. ಎರಡೂ ಕುಟುಂಬಗಳ ಜನರ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆಗೆ ಕಳಿಸಿಕೊಡಲಾಗಿದೆ.
ಇದನ್ನೂ ಓದಿ: ವಿಶ್ವ ಹಸಿವಿನ ದಿನ: ಜಗತ್ತಿನಲ್ಲಿ ಇಂದಿಗೂ ಹಸಿವಿನಿಂದ ಬಳಲುತ್ತಿದ್ದಾರೆ 800 ಮಿಲಿಯನ್ ಜನ! - World Hunger Day