ಚೈಬಾಸಾ (ಜಾರ್ಖಂಡ್): ಚೈಬಾಸಾ ಸಮೀಪದ ಚಕ್ರಧರಪುರ ರೈಲ್ವೆ ವಿಭಾಗದ ಕೆಂಡಪೋಸಿ - ತಲಬೂರು ನಡುವಿನ ರೈಲು ಹಳಿಯಲ್ಲಿ ಶನಿವಾರ ಬೆಳಗ್ಗೆ ನಾಲ್ವರ ಶವಗಳು ಪತ್ತೆಯಾಗಿವೆ. ಎಲ್ಲ ದೇಹಗಳು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಒಂದರಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಎಲ್ಲ ಮೃತದೇಹಗಳು ಪತ್ತೆಯಾಗಿವೆ. ರೈಲ್ವೆ ಹಳಿಗಳ ಮೇಲೆ ಹೀಗೆ ಮೃತದೇಹಗಳು ಪತ್ತೆ ಆಗಿರುವುದು ಈ ಭಾಗದ ಜನರಲ್ಲಿ ಭಾರಿ ಭೀತಿಯನ್ನು ಸೃಷ್ಟಿ ಮಾಡಿವೆ.
ರೈಲು ಹಳಿಗಳ ಮೇಲೆ ಮೃತದೇಹಗಳು ದೊರೆತಿರುವ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ''ಶುಕ್ರವಾರ ರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ನಾಲ್ವರೂ ಕೊಲೆಯಾಗಿದ್ದಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದರ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಮೃತದೇಹಗಳು ಪತ್ತೆಯಾಗಿರುವ ರೀತಿ ನೋಡಿದರೆ ಮೇಲ್ನೋಟಕ್ಕೆ ಯಾರೋ ಕೊಲೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸುವ ಯತ್ನ ಮಾಡಿದ್ದಾರೆ ಎಂಬ ಅನುಮಾನ ಮೂಡಿ ಬರುತ್ತಿದೆ. ಮೃತರಲ್ಲಿ ಓರ್ವ ಪುರುಷ, ಓರ್ವ ಮಹಿಳೆ ಹಾಗೂ ಮಗು ಸೇರಿದೆ. ಮತ್ತೊಬ್ಬನ ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಎಸೆಯಲಾಗಿತ್ತು. ಒಂದರಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಎಲ್ಲ ಮೃತದೇಹಗಳು ಪತ್ತೆಯಾಗಿವೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
''ಸದ್ಯಕ್ಕೆ ಮೃತ ದೇಹಗಳ ಗುರುತು ಪತ್ತೆಯಾಗಿಲ್ಲ. ಮೃತ ದೇಹವನ್ನು ರೈಲ್ವೆ ಹಳಿಯಿಂದ ಹೊರ ತೆಗೆಯಲಾಗುತ್ತಿದೆ. ಘಟನೆಯಿಂದ ಕೆಲವು ಹೊತ್ತು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬೇರೆಡೆ ಕೊಲೆ ಮಾಡಿ ಶವಗಳನ್ನು ಟ್ರ್ಯಾಕ್ ಮೇಲೆ ಎಸೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳೀಯರು ಕೂಡ ಅದೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ತನಿಖೆ ಅವಶ್ಯ ಇದೆ'' ಎಂದು ಪೊಲೀಸ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಹುಂಡೈ ಕಾರು ಶೋರೂಂಗೆ ಆಕಸ್ಮಿಕ ಬೆಂಕಿ - ಮೂರು ಸಂಪೂರ್ಣ, 7 ಕಾರುಗಳಿಗೆ ಭಾಗಶಃ ಹಾನಿ