ನವದೆಹಲಿ: ಸುಮಾರು 2 ವರ್ಷಗಳ ನಂತರ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕಪಾಲಕ್ಕೆ ಮುಖ್ಯಸ್ಥರ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ. ಎಂ. ಖಾನ್ವಿಲ್ಕರ್ ಅವರನ್ನು ಈ ಹುದ್ದೆಗೆ ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿಗಳಾದ ರಿತು ರಾಜ್ ಅವಸ್ತಿ, ಹಿಮಾಚಲ ಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಲಿಂಗಪ್ಪ ನಾರಾಯಣ ಸ್ವಾಮಿ, ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜಯ್ ಯಾದವ್ ಅವರನ್ನು ನ್ಯಾಯಾಂಗದ ಸದಸ್ಯರಾಗಿ ನೇಮಿಸಲಾಗಿದೆ. ಸುಶೀಲ್ ಚಂದ್ರ, ಪಂಕಜ್ ಕುಮಾರ್ ಮತ್ತು ಅಜಯ್ ಟರ್ಕಿ ಅವರನ್ನು ನ್ಯಾಯಾಂಗೇತರ ಸದಸ್ಯರಾಗಿ ನೇಮಿಸಿ ರಾಷ್ಟ್ರಪತಿ ಭವನ ಪ್ರಕಟಣೆ ಹೊರಡಿಸಿದೆ.
2022 ರಲ್ಲಿ ಪಿನಾಕಿ ಚಂದ್ರ ಘೋಷ್ ಅವರ ಅವಧಿ ಮುಗಿದ ಬಳಿಕ ಲೋಕಪಾಲ ಸಂಸ್ಥೆಯ ಮುಖ್ಯಸ್ಥರ ಹುದ್ದೆ ಖಾಲಿಯಾಗಿತ್ತು. ಲೋಕಪಾಲವು ಮುಖ್ಯಸ್ಥರು ಸೇರಿದಂತೆ 8 ಸದಸ್ಯರನ್ನು ಹೊಂದಿದೆ. ಇದರಲ್ಲಿ ನಾಲ್ವರು ನ್ಯಾಯಾಂಗ ಮತ್ತು ಇತರರು ನ್ಯಾಯಾಂಗೇತರ ಸದಸ್ಯರಾಗಿ ಇರುತ್ತಾರೆ.
ನೇಮಕಗೊಂಡ ಸದಸ್ಯರ ಪರಿಚಯ: ಲೋಕಪಾಲ ಮುಖ್ಯಸ್ಥರಾಗಿರುವ ಎ. ಎಂ. ಖಾನ್ವಿಲ್ಕರ್ ಅವರು 2016 ರಿಂದ 2022 ರ ವರೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ನ್ಯಾಯಾಂಗ ಸದಸ್ಯರಾಗಿರುವ ನಾರಾಯಣಸ್ವಾಮಿ ಅವರು 2109 ರಿಂದ 2021 ಅವಧಿಯಲ್ಲಿ ಹಿಮಾಚಲಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಲೋಕಪಾಲದ ನ್ಯಾಯಾಂಗ ಸದಸ್ಯರಾಗಿ ಆಯ್ಕೆಯಾದ ನಿವೃತ್ತ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರು ಕರ್ನಾಟಕ ಹೈಕೋರ್ಟ್‌ನ ಜಡ್ಜ್ ಆಗಿ 2021-2022 ರ ಅವಧಿಯಲ್ಲಿ ಕೆಲಸ ಮಾಡಿದ್ದರು. ನಿವೃತ್ತಿ ಬಳಿಕ ಅವರನ್ನು 2022 ರಲ್ಲಿ ಭಾರತದ ಕಾನೂನು ಆಯೋಗದ ಅಧ್ಯಕ್ಷರಾಗಿ ನೇಮಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಮೊಹಂತಿ ಅವರು ಪ್ರಸ್ತುತ ಗ್ರಾಫ್ಟ್ ವಿರೋಧಿ ಒಂಬುಡ್ಸ್‌ಮನ್‌ನ ಹಂಗಾಮಿ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿಲಯ್ ವಿಪಿನ್ಚಂದ್ರ ಅಂಜಾರಿಯ ಪದಗ್ರಹಣ