ರಾಂಚಿ(ಜಾರ್ಖಂಡ್): ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಮಾಜಿ ನಾಯಕ ಚಂಪೈ ಸೊರೆನ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಂಚಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಚಂಪೈ ಸೊರೆನ್ ತಮ್ಮ ಪುತ್ರ ಬಾಬುಲಾಲ್ ಸೊರೆನ್ ಸೇರಿದಂತೆ ಸಾವಿರಾರು ಬೆಂಬಲಿಗರೊಂದಿಗೆ ಕಮಲ ಪಡೆ ಸೇರಿದ್ದಾರೆ.
ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಇತರ ಉನ್ನತ ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಜೆಎಂಎಂಗೆ ರಾಜೀನಾಮೆ ನೀಡಿದ ಚಂಪೈ ಸೊರೆನ್: ಚಂಪೈ ಸೊರೆನ್ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, 'ಇಂದು ಜಾರ್ಖಂಡ್ ಮುಕ್ತಿ ಮೋರ್ಚಾದ ಪ್ರಾಥಮಿಕ ಸದಸ್ಯತ್ವ ಮತ್ತು ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ. ಜಾರ್ಖಂಡ್‌ನ ಆದಿವಾಸಿಗಳು, ಸ್ಥಳೀಯರು, ದಲಿತರು, ಹಿಂದುಳಿದವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಪರವಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಜೆಎಂಎಂನ ಪ್ರಸ್ತುತ ನೀತಿಗಳು ಮತ್ತು ಕಾರ್ಯಶೈಲಿಯಿಂದ ಅಸಮಾಧಾನಗೊಂಡ ನಂತರ ಪಕ್ಷ ತೊರೆಯಲು ನಿರ್ಧರಿಸಲಾಯಿತು ಎಂದು ಗುರು ಶಿಬು ಸೊರೆನ್ಗೆ ಬರೆದ ರಾಜೀನಾಮೆ ಪತ್ರದಲ್ಲಿ ಚಂಪೈ ಸೊರೆನ್ ಉಲ್ಲೇಖಿಸಿದ್ದಾರೆ. ‘ನಿಮ್ಮ ಮಾರ್ಗದರ್ಶನದಲ್ಲಿ ನಮ್ಮಂತಹ ಕಾರ್ಯಕರ್ತರು ಕನಸು ಕಂಡಿದ್ದ ಮತ್ತು ಅದಕ್ಕಾಗಿ ಕಾಡು, ಗುಡ್ಡ, ಹಳ್ಳಿಗಳನ್ನು ಸುತ್ತಿದ ಪಕ್ಷ ಇಂದು ದಿಕ್ಕು ತಪ್ಪಿಸಿದೆ’ ಎಂದು ಹೇಳಿದ್ದಾರೆ.
'ಜೆಎಂಎಂ ನನಗೆ ಕುಟುಂಬವಿದ್ದಂತೆ ಮತ್ತು ನಾನು ಪಕ್ಷ ತೊರೆಯಬೇಕಾಗುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಕೆಲವು ದಿನಗಳ ಹಿಂದೆ ನಡೆದ ಬೆಳವಣಿಗೆಗಳಿಂದ ನಾನು ಈ ಕಠಿಣ ನಿರ್ಧಾರವನ್ನು ಬಹಳ ನೋವಿನಿಂದ ತೆಗೆದುಕೊಳ್ಳಬೇಕಾಯಿತು' ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಶಿಬು ಸೊರೆನ್ ಅವರನ್ನು ಉದ್ದೇಶಿಸಿ ಚಂಪೈ ಸೊರೆನ್ ಬರೆದಿದ್ದಾರೆ.
ಜಾರಿ ನಿರ್ದೇಶನಾಲಯದಿಂದ (ಇಡಿ) ಹೇಮಂತ್ ಸೊರೆನ್ ಅವರನ್ನು ಬಂಧಿಸುವ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ, ಚಂಪೈ ಸೊರೆನ್ ಅವರನ್ನು ಸಿಎಂ ಆಗಿ ನೇಮಿಸಲಾಗಿತ್ತು. ಹೇಮಂತ್ ಸೊರೆನ್ ಜೈಲಿನಲ್ಲಿರುವವರೆಗೂ ಅವರು ಸಿಎಂ ಆಗಿದ್ದರು. ಹೇಮಂತ್ ಸೊರೆನ್ ಜಾಮೀನು ಪಡೆದು ಹೊರ ಬಂದ ನಂತರ ಸಿಎಂ ಸ್ಥಾನದಿಂದ ಚಂಪೈ ಸೊರೆನ್ ಕೆಳಗಿಳಿಯಬೇಕಾಯಿತು.