ಪಾಟ್ನಾ (ಬಿಹಾರ) : ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಪಾಟ್ನಾದ ದಿಘಾ ಘಾಟ್‌ನಲ್ಲಿ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸುಶೀಲ್ ಮೋದಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಹಾರದ ಉಪ ಮುಖ್ಯಮಂತ್ರಿಯಾಗಿ ತಮ್ಮ ಛಾಪು ಮೂಡಿಸಿದ ಸುಶೀಲ್ ಮೋದಿ ಸೋಮವಾರ ದೆಹಲಿಯ ಏಮ್ಸ್‌ನಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಇಂದು ದೆಹಲಿಯಿಂದ ಪಾಟ್ನಾಗೆ ತರಲಾಗಿದ್ದು, ಅಂತಿಮ ದರ್ಶನಕ್ಕಾಗಿ ಅವರ ರಾಜೇಂದ್ರ ನಗರದ ನಿವಾಸದಲ್ಲಿ ಇರಿಸಲಾಗಿದೆ. ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ಮೊದಲು ಬಿಜೆಪಿ ರಾಜ್ಯ ಕಚೇರಿಗೆ, ನಂತರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.
ವಿಮಾನ ನಿಲ್ದಾಣದಲ್ಲಿ ಶ್ರದ್ಧಾಂಜಲಿ: ಇದಕ್ಕೂ ಮುನ್ನ ಸುಶೀಲ್ ಮೋದಿ ಅವರ ಪಾರ್ಥಿವ ಶರೀರ ಪಾಟ್ನಾ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಸುಶೀಲ್ ಮೋದಿ ಅವರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು. ವಿಧಾನಸಭಾಧ್ಯಕ್ಷ ನಂದಕಿಶೋರ್ ಯಾದವ್, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಸಂಸದ ರಾಮಕೃಪಾಲ್ ಯಾದವ್, ಪಕ್ಷದ ವಕ್ತಾರ ಶಾನವಾಜ್ ಹುಸೇನ್, ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ಮತ್ತು ಬಿಜೆಪಿ-ಜೆಡಿಯು ನಾಯಕರು-ಕಾರ್ಯಕರ್ತರು ಮತ್ತು ಸುಶೀಲ್ ಮೋದಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಟ್ನಾ ವಿಮಾನ ನಿಲ್ದಾಣವನ್ನು ತಲುಪಿದ್ದರು. ಎಲ್ಲರೂ ಸುಶೀಲ್ ಮೋದಿಯವರ ಪಾರ್ಥೀವ ಶರೀರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಸಂಜೆ 6 ಗಂಟೆಗೆ ಅಂತ್ಯಕ್ರಿಯೆ : ಅಂತಿಮ ದರ್ಶನ ಹಾಗೂ ಶ್ರದ್ಧಾಂಜಲಿ ಬಳಿಕ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ ಎಂಬುದು ತಿಳಿದು ಬಂದಿದೆ. ಸಂಜೆ 6 ಗಂಟೆಗೆ ಪಾಟ್ನಾದ ದಿಘಾ ಘಾಟ್‌ನಲ್ಲಿ ಸುಶೀಲ್ ಕುಮಾರ್ ಮೋದಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ. ಸಿಎಂ ನಿತೀಶ್ ಕುಮಾರ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿಎಂ ನಿತೀಶ್ ಕುಮಾರ್ ತೀವ್ರ ಸಂತಾಪ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಶೀಲ್ ಮೋದಿ ನಿಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಜ್ಯಸಭಾ ಮಾಜಿ ಸಂಸದ ಸುಶೀಲ್ ಕುಮಾರ್ ಮೋದಿ ಅವರ ನಿಧನ ದುಃಖ ತಂದಿದೆ ಎಂದು ಹೇಳಿದ್ದಾರೆ. ಉಪಮುಖ್ಯಮಂತ್ರಿಯಾಗಿಯೂ ನಮ್ಮೊಂದಿಗೆ ಸುದೀರ್ಘ ಕಾಲ ಕೆಲಸ ಮಾಡಿದ್ದಾರೆ. ನಾನು ಅವರೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದೇನೆ ಮತ್ತು ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದಿದ್ದಾರೆ.
"ನಾನು ನಿಜವಾದ ಸ್ನೇಹಿತ ಮತ್ತು ಕಠಿಣ ಪರಿಶ್ರಮಿ ರಾಜಕಾರಣಿಯನ್ನು ಕಳೆದುಕೊಂಡಿದ್ದೇನೆ. ಅವರ ನಿಧನವು ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕುಟುಂಬ, ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ದುಃಖದ ಈ ಸಮಯದಲ್ಲಿ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದಿದ್ದಾರೆ. ದಿವಂಗತ ಸುಶೀಲ್ ಕುಮಾರ್ ಮೋದಿ ಅವರ ಪತ್ನಿ ಶ್ರೀಮತಿ ಜೆಸ್ಸಿ ಜಾರ್ಜ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಮೋದಿ ಇನ್ನಿಲ್ಲ - Sushil Modi Passed Away