ನವದೆಹಲಿ: ಲೋಕಸಭಾ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್ಗೆ ಭಾರೀ ಹಿನ್ನಡೆ ಉಂಟಾಗಿದೆ. ಆಮ್ ಆದ್ಮಿ ಪಕ್ಷದ (ಆಪ್) ಜೊತೆಗೆ ಮೈತ್ರಿ ಮತ್ತು ಲೋಕಸಭಾ ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ಮುನಿಸಿಕೊಂಡು ಪಕ್ಷದಿಂದ ಈಚೆಗೆ ಹೊರಬಂದಿದ್ದ ದೆಹಲಿ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಅರವಿಂದ್ ಸಿಂಗ್ ಲವ್ಲಿ ಇಂದು (ಶನಿವಾರ) ಬಿಜೆಪಿ ಸೇರ್ಪಡೆಯಾದರು.
ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಲವ್ಲಿ ಜೊತೆಗೆ, ದೆಹಲಿ ಸರ್ಕಾರದ ಮಾಜಿ ಸಚಿವ ರಾಜ್ ಕುಮಾರ್ ಚೌಹಾಣ್, ಮಾಜಿ ಶಾಸಕ ನೀರಜ್ ಬಸೋಯಾ ಮತ್ತು ನಸೀಬ್ ಸಿಂಗ್ ಸೇರಿದಂತೆ ಕೆಲವು ನಾಯಕರು ಬಿಜೆಪಿ ಬಾವುಟ ಹಿಡಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಲವ್ಲಿ ಸಿಂಗ್, ಪಕ್ಷ ಸೇರಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸಿದರು. ಆಮ್ ಆದ್ಮಿ ಪಕ್ಷದ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗೆದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.
ಮರಳಿ ಗೂಡು ಸೇರಿದ ಲವ್ಲಿ: 2018 ರಲ್ಲಿ ಬಿಜೆಪಿ ತೊರೆದ ಬಳಿಕ ಕಾಂಗ್ರೆಸ್ಗೆ ಮರಳಿದ್ದ ಅರವಿಂದರ್ ಸಿಂಗ್ ಲವ್ಲಿ ಈಗ ಮತ್ತೆ ಬಿಜೆಪಿ ಸೇರಿದ್ದಾರೆ. ಪಕ್ಷದಲ್ಲಿ ಇದು ಅವರ ಎರಡನೇ ಇನಿಂಗ್ಸ್ ಆಗಿದೆ. I.N.D.I.A ಮೈತ್ರಿಕೂಟ ರಚನೆಯಾದ ಬಳಿಕ ಆಮ್ ಆದ್ಮಿ ಜೊತೆಗೆ ಸೀಟು ಹಂಚಿಕೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಲವ್ಲಿ ಬೇಸರ ವ್ಯಕ್ತಪಡಿಸಿದ್ದರು.
ಇದರ ಜೊತೆಗೆ ರಾಷ್ಟ್ರ ರಾಜಧಾನಿಯಲ್ಲಿ ಕನ್ಹಯ್ಯಾ ಕುಮಾರ್ ಮತ್ತು ಉದಿತ್ ರಾಜ್ ಸೇರಿದಂತೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ವಿರುದ್ಧವೂ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರು ಕೆಲ ದಿನಗಳ ಹಿಂದೆ ದೆಹಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲವ್ಲಿ ಅವರು ಆಗಸ್ಟ್ 2023 ರಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಪಕ್ಷದಿಂದ ಹೊರಬಂದಿದ್ದರು.
ಇದನ್ನೂ ಓದಿ: ಆಪ್ನೊಂದಿಗೆ ಮೈತ್ರಿ ವಿರೋಧಿಸಿ ದೆಹಲಿ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ - Delhi Congress president