ನವದೆಹಲಿ: ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಜನರು ಉತ್ಸಾಹದಿಂದ ಭಾಗಿಯಾಗಿದ್ದಾರೆ. ದೆಹಲಿ ಪೂರ್ವ ಲೋಕಸಭಾ ಹಾಲಿ ಸಂಸದ ಮತ್ತು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಬೆಳಗ್ಗೆಯೇ ಮತಕೇಂದ್ರಕ್ಕೆ ಬಂದು ಮತದಾನ ಮಾಡಿದರು. ನಿಗದಿತ ಮತಗಟ್ಟೆಗೆ ಆಗಮಿಸಿದ ಅವರು ತಮ್ಮ ಹಕ್ಕನ್ನು ಚಲಾಯಿಸಿ, ಬೆರಳಿಗೆ ಅಂಟಿಸಿದ್ದ ಶಾಯಿಯ ಗುರುತನ್ನು ಮಾಧ್ಯಮಗಳಿಗೆ ತೋರಿಸಿದರು.
ಬಳಿಕ ಮಾತನಾಡಿದ ಗಂಭೀರ್, ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿಕೊಂಡರು. ಮತ ಚಲಾಯಿಸುವುದು ಜನರ ಶಕ್ತಿ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಇದು ನಮ್ಮ ಶಕ್ತಿ, ಇದು ನಮ್ಮ ಪ್ರಜಾಪ್ರಭುತ್ವ ಎಂದರು.
ಮತದಾನ ನಿಧಾನಕ್ಕೆ ಸೂಚನೆ ಆರೋಪ: ದೆಹಲಿಯಲ್ಲಿ I.N.D.I.A ಕೂಟದ ಅಭ್ಯರ್ಥಿಗಳು ಹಿಡಿತ ಹೊಂದಿರುವ ಪ್ರದೇಶದಲ್ಲಿ ಮತದಾನ ನಿಧಾನಗತಿಯಲ್ಲಿ ನಡೆಸಲು ಲೆಫ್ಟಿನೆಂಟ್ ಗವರ್ನರ್ ಅವರು ನಿರ್ದೇಶನ ನೀಡಿದ್ದಾರೆ ಎಂದು ದೆಹಲಿ ಆಪ್ ಸರ್ಕಾರದ ಸಚಿವೆ ಅತಿಶಿ ಆರೋಪಿಸಿದರು.
ಮತದಾನ ಮಾಡಲು ಇಲ್ಲಿನ ಬೂತ್ಗೆ ಬಂದಾಗ ಮಾಧ್ಯಮಗಳೊಂದಿಗೆ ಮಾತನಾಡಿ, ಶುಕ್ರವಾರ ಸಂಜೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು, ಪೊಲೀಸ್ ಅಧಿಕಾರಿಗಳ ಸಭೆ ಕರೆದು, ಇಂಡಿಯಾ ಮೈತ್ರಿಕೂಟದ ಪ್ರಾಬಲ್ಯವಿರುವ ಎಲ್ಲಾ ಕ್ಷೇತ್ರಗಳಲ್ಲಿ ಮತದಾನವನ್ನು ನಿಧಾನಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಈ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿದೆ. ಇದು ನಡೆದದ್ದೇ ಆದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಚುನಾವಣಾ ಆಯೋಗವು ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದಾರೆ.
ಆಪ್ ಸರ್ಕಾರ ಮಾಡಿರುವ ಈ ಆರೋಪವನ್ನು ಗವರ್ನರ್ ಕಚೇರಿ ನಿರಾಕರಿಸಿದೆ. ಇದರ ವಿರುದ್ಧ ಕ್ರಮಕ್ಕೆ ಸೂಚಿಸಲಾಗುವುದು ಎಂದು ಹೇಳಿದೆ.