ತೂತುಕುಡಿ(ತಮಿಳುನಾಡು): ಇಲ್ಲಿನ ವೆಲವನ್ ಹೈಪರ್ ಮಾರ್ಕೆಟ್ ಕಾಂಪ್ಲೆಕ್ಸ್ನಲ್ಲಿರುವ ಕೆಎಫ್ಸಿ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಈ ವೇಳೆ ನಿಷೇಧಿತ ಮೆಗ್ನಿಶಿಯಂ ಸಿಲಿಕೇಟ್ ಸಿಂಥೆಟಿಕ್ ಅನ್ನು ಎಣ್ಣೆ ಶುದ್ದಗೊಳಿಸಲು ಬಳಸುತ್ತಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕೆಎಫ್‌ಸಿಯ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದಾರೆ.
ಪರೀಕ್ಷೆಯಲ್ಲಿ ಕರಿದ ಎಣ್ಣೆ ಶುದ್ಧೀಕರಣಕ್ಕೆ ಮೆಗ್ನಿಷಿಯಂ ಸಿಲಿಕೇಟ್ ಸಿಂಥೆಟಿಕ್ ಎಂಬ ಆಹಾರ ಸಂಯೋಜಕ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಈ ಆಹಾರ ಸಂಯೋಜಕವನ್ನು ಉಪಯೋಗಿಸಲು ಅನುಮತಿ ಇಲ್ಲ.
ದಾಳಿಯ ವೇಳೆ 18 ಕೆಜಿ ಮೆಗ್ನಿಶಿಯಂ ಸಿಲಿಕೇಟ್ ಸಿಂಥೆಟಿಕ್ ಹಾಗೂ 45 ಲೀಟರ್ ಹಳೆಯ ಶುದ್ಧಿಕರಿಸಿದ ಎಣ್ಣೆಯನ್ನು ವಶಕ್ಕೆ ಪಡೆಯಲಾಗಿದೆ. 12 ಗಂಟೆಗಳ ಕಾಲ ಬಳಕೆ ಮಾಡದಂತಹ 56 ಕೆಜಿ ಚಿಕನ್ ವಶಕ್ಕೆ ಪಡೆದು, ನಾಶಪಡಿಸಲಾಗಿದೆ.
ತನಿಖೆಯಲ್ಲಿ ಕೆಎಫ್ಸಿ ರೆಸ್ಟೋರೆಂಟ್ ಲೈಸೆನ್ಸ್‌ನಲ್ಲೂ ಅಕ್ರಮ ನಡೆದಿರುವುದು ಕಂಡುಬಂದಿದೆ. ಸ್ಟಾಕ್ ರಿಜಿಸ್ಟ್ರರ್‌ನಲ್ಲಿ ನಮೂದಿಸದೆಯೇ ಮೆಗ್ನೀಸಿಯಮ್ ಸಿಲಿಕೇಟ್ ಸಿಂಥೆಟಿಕ್ ಆಹಾರ ಸೇರ್ಪಡೆಗಳ ಬಳಕೆಯ ಬಗ್ಗೆ ತನಿಖೆ ನಡೆಸಲಾಗುವುದು. ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಳೆಯ ಎಣ್ಣೆಯನ್ನು ಶುದ್ಧೀಕರಿಸಲು ಇವುಗಳನ್ನು ಅನುಮತಿಯಿಲ್ಲದೆ ಬಳಸುವುದನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಈ ಪ್ರಕರಣದಲ್ಲಿ ಆಹಾರ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ರೆಸ್ಟೋರೆಂಟ್ ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ರೆಸ್ಟೋರೆಂಟ್ ತೆರೆಯದಂತೆ ಸೂಚನೆ ನೀಡಲಾಗಿದೆ. ಮೆಗ್ನಿಶಿಯಂ ಸಿಲಿಕೇಟ್ ಸಿಂಥೆಟಿಕ್ ಮತ್ತು ಶುದ್ಧೀಕರಣ ಮಾಡಿರುವ ಹಳೆಯ ಕರಿದ ಎಣ್ಣೆಯ ಮಾದರಿಯನ್ನು ಪರೀಕ್ಷೆಗೆ ಕಳಿಹಿಸಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ನಗರದ ಕೆಲವು ಪ್ರದೇಶಗಳಲ್ಲಿನ ಪಾನಿಪೂರಿ ಅಂಗಡಿಗಳಲ್ಲೂ ಆಹಾರ ಪರೀಕ್ಷೆ ನಡೆಸಲಾಗಿದೆ. ಪಾನಿ ತಯಾರಿಸಲು ಯಾವುದೇ ಕೃತಕ ಬಣ್ಣ ಬಳಸುತ್ತಿರುವುದು ಕಂಡುಬಂದಿಲ್ಲ. ಆದಾಗ್ಯೂ ಮೂರು ಪಾನಿಪೂರಿ ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಇನ್ನೆರಡು ದಿನಗಳ ಬಳಿಕ ಬರಲಿದ್ದು, ಅದರನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಇನ್ನು ಮುಂದೆ ಅಡುಗೆ ಮನೆಯ ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳಿಗೆ ISI ಮಾರ್ಕ್ ಕಡ್ಡಾಯ