ಅಯೋಧ್ಯೆ: ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಅಯೋಧ್ಯಾ ನಗರಿ ಸಜ್ಜಾಗಿದೆ. ಭವ್ಯ ದೇಗುಲವೂ ಸೇರಿದಂತೆ ಇಡೀ ನಗರ ಬಗೆಬಗೆಯ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಈ ಅಲಂಕಾರಕ್ಕಾಗಿ 9 ಟನ್ ಹೂವುಗಳನ್ನು ಬಳಸಲಾಗಿದೆ.
ನಗರದ ವಿವಿಧೆಡೆ ಆಕರ್ಷಕ ಅಲಂಕಾರಕ್ಕೆ ಗುಲಾಬಿ, ಚೆಂಡು ಹೂವು, ಸುಗಂಧರಾಜ, ಸೇವಂತಿಗೆ, ಆರ್ಕಿಡ್ ಸೇರಿದಂತೆ ಹಲವು ಹೂವುಗಳನ್ನು ಬಳಕೆ ಮಾಡಲಾಗಿದೆ. ಒಟ್ಟಾರೆ 10 ಟನ್ ಹೂವುಗಳು ಅಯೋಧ್ಯೆ ತಲುಪಿವೆ. ಇದರಲ್ಲಿ 100 ಬಾಕ್ಸ್ ಸೇವಂತಿಗೆ, 50ರಿಂದ 60 ಬಾಕ್ಸ್ ಆರ್ಕಿಡ್, 20ರಿಂದ 25 ಬಾಕ್ಸ್ ಆಂಥೂರಿಯಂ ಮತ್ತು ಕೋಲ್ಕತ್ತಾದಿಂದ ಚೆಂಡು ಹೂವು ಸೇರಿದಂತೆ ಹಲವೆಡೆಗಳಿಂದ ಹೂವಿನ ಪೆಟ್ಟಿಗೆಗಳು ಬಂದಿವೆ. ಅಷ್ಟೇ ಅಲ್ಲದೇ ಇಲ್ಲಿನ ಹಪುರ್ ಜಿಲ್ಲೆಯಲ್ಲೂ ಕೂಡ ಸಾಕಷ್ಟು ಹೂವುಗಳನ್ನು ಬೆಳೆಯಲಾಗುತ್ತಿದ್ದು, ಅದನ್ನೂ ಬಳಸಲಾಗುತ್ತಿದೆ.
ನೂರಾರು ಮಹಿಳೆಯರಿಗೆ ಉದ್ಯೋಗ: ಪ್ರಾಣಪ್ರತಿಷ್ಠಾಪನೆ ಹೂವಿನ ಅಲಂಕಾರ ಮತ್ತು ಹಾರ ಜೋಡಣೆಯಂತಹ ಕಾರ್ಯಕ್ಕೆ ನೂರಾರು ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳಿಗೆ ಉದ್ಯೋಗ ಸೃಷ್ಟಿಯಾಗಿದೆ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಬಳಿಕ ಈ ಹೂವಿನ ತ್ಯಾಜವನ್ನು ಮರುಬಳಕೆ ಮಾಡಲಾಗುವುದು ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪ ಮುಖ್ಯಸ್ಥ ವಿಶಾಲ್ ಸಿಂಗ್ ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯಲ್ಲಿ ಅಯೋಧ್ಯೆಯಲ್ಲಿನ ಪ್ರತಿ ದೇಗುಲದ ಹೂವುಗಳನ್ನು ಸಂಗ್ರಹಿಸಲಾಗುವುದು. ಪ್ರಾಣಪ್ರತಿಷ್ಠಾಪನೆಯ ಬಳಿಕ ಕೂಡ ಅಯೋಧ್ಯೆಯಲ್ಲಿ ದೇಗುಲದಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗಲಿದ್ದು, ಹೂವಿನ ತ್ಯಾಜ್ಯ ಕೂಡ ಹೆಚ್ಚಲಿದೆ. ಈ ಹೂವುಗಳನ್ನು ಅಗರಬತ್ತಿ ಸೇರಿದಂತೆ ವಿವಿಧ ದೂಪ ದ್ರವ್ಯಗಳ ಬಳಕೆಯಲ್ಲಿ ಉಪಯೋಗಿಸಲಾಗುವುದು. ಇದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ.
ಪ್ರಾಣ ಪ್ರತಿಷ್ಠಾಪನೆಯ ಬಳಿಕ ಒಂಬತ್ತು ಟನ್ ಹೂವಿನ ಮರುಬಳಕೆ ನಡೆಯಲಿದೆ. ಇದಾದ ಬಳಿಕ ದಿನಕ್ಕೆ 2.3 ಟನ್ ಹೂವು ಸಂಗ್ರಹವಾಗಬಹುದು. ಈ ಮೂಲಕ ದೇಗುಲದ ಆವರಣದಲ್ಲಿ ಶುಚಿತ್ವ ಕಾಪಾಡುವ ಉದ್ದೇಶದಿಂದ ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಶನ್ ಹೊಸ ಯೋಜನೆ ರೂಪಿಸಿದೆ. ಅಯೋಧ್ಯಾ ಧಾಮ ದೇಗುಲದಲ್ಲಿ ಅರ್ಪಿಸಲಾಗುವ ಹೂವುಗಳನ್ನು ಸಂಸ್ಕರಿಸಿ ಅಗರಬತ್ತಿ ಸೇರಿದಂತೆ ಧೂಪದ್ರವ್ಯ ಬಳಕೆ ಮಾಡುವ ಯೋಜನೆಗೆ ಅದು ಮುಂದಾಗಿದೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.
ದೇಗುಲಗಳ ಹೂವು ಸಂಗ್ರಹಿಸಿ ಮರುಬಳಕೆ ಮಾಡುವ ಸಂಬಂಧ ಪೂಲ್ ಎಂಬ ಕಂಪನಿ ಜೊತೆಗೆ ಅಯೋಧ್ಯ ನಗರ ಪಾಲಿಕೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. (ಐಎಎನ್ಎಸ್)
ಇದನ್ನೂ ಓದಿ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ: ಹಳೆಯ ವಿಗ್ರಹ ಇಡುವುದೆಲ್ಲಿ?