ಸೂರತ್(ಗುಜರಾತ್): ಗುಜರಾತ್‌ನ ಡೈಮಂಡ್ ಸಿಟಿ ಮತ್ತು ಸಿಲ್ಕ್ ಸಿಟಿ ಎಂಬ ಖ್ಯಾತಿಯ ಸೂರತ್ ಈಗ ರಾಜಹಂಸಗಳ ನಗರಿಯಾಗಿ ಪರಿವರ್ತನೆಗೊಂಡಿದೆ. 'ಸುರ್ಖಾಬ್' ಎಂದೇ ಹೆಸರಾಗಿರುವ ಈ ಪಕ್ಷಿಗಳು ಸೂರ್ಯಪುತ್ರಿ ತಾಪಿ ನದಿ ದಡದಲ್ಲಿ ಬೀಡುಬಿಟ್ಟಿವೆ. ಪಕ್ಷಿಪ್ರೇಮಿಗಳೂ ಸೇರಿದಂತೆ ಜನಸಾಮಾನ್ಯರನ್ನು ಇವುಗಳು ಆಕರ್ಷಿಸುತ್ತಿವೆ.
'ರಾಜಹಂಸ' ಗುಜರಾತ್‌ನ ರಾಜ್ಯ ಪಕ್ಷಿಯೂ ಹೌದು. ಖಂಭತ್ ಮತ್ತು ಕಚ್ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಕಳೆದ ಐದು ವರ್ಷಗಳಿಂದ ಸೂರತ್‌ನಲ್ಲಿ ಫ್ಲೆಮಿಂಗೊಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇತರ ಜಿಲ್ಲೆಗಳಲ್ಲಿ ಈ ಪಕ್ಷಿಗಳ ಸಂಖ್ಯೆ ವಿರಳ ಎಂದೇ ಹೇಳಬಹುದು. ಆದರೆ, ಈ ವರ್ಷ ಸೂರತ್‌ನಲ್ಲಿ 2,000ಕ್ಕಿಂತ ಹೆಚ್ಚಿನ ರಾಜಹಂಸಗಳ ಕಲರವ ನೋಡಬಹುದು.
ಇತ್ತೀಚಿನ ಬೇಸಿಗೆಯಲ್ಲಿ ತಾಪಿ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮದಲ್ಲಿ ಸುರ್ಖಾಬ್ ಪಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಕಾಣಸಿಗುತ್ತಿವೆ. ಈ ಹಿಂದೆ ಈ ರಾಜಹಂಸಗಳಂತಹ ಪಕ್ಷಿಗಳು ಸೂರತ್‌ನಿಂದ ಬೇರೆಡೆಗೆ ಹೋಗುತ್ತಿದ್ದವು. ಕಳೆದ 7-8 ವರ್ಷಗಳಿಂದ ಇವು ಸೂರತ್‌ಗೆ ಅತಿಥಿಗಳಾಗಿ ಬರುತ್ತಿವೆ. ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ಏರುತ್ತಲೇ ಸಾಗಿದೆ ಎಂಬುದು ವಿಶೇಷ.
ಸೂರತ್‌ನಲ್ಲಿ ಕಂಡುಬರುವ ಫ್ಲೆಮಿಂಗೊಗಳು ಅಮೆರಿಕದಲ್ಲಿ ಕಂಡುಬರುವ ಈ ಬಗೆಯ ನಾಲ್ಕು ಜಾತಿಗಳಲ್ಲಿ ಒಂದಾಗಿದೆ. ಒಂದು ಕಾಲಿನ ಮೇಲೆ ನಿಂತು, ಇನ್ನೊಂದು ಕಾಲನ್ನು ಬಾಗಿದಂತೆ ಇಡುವುದು ಈ ಹಕ್ಕಿಗಳ ವಿಶೇಷತೆ. ತಾಪಿ ನದಿ ದಡದಲ್ಲಿ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿರುವ ಫ್ಲೆಮಿಂಗೋಗಳು ನೋಡಲು ಸೂರ್ಯ ನಮಸ್ಕಾರ ಮಾಡುತ್ತಿರುವಂತೆಯೂ ಗೋಚರಿಸುತ್ತವೆ.
ಈ ಬಗ್ಗೆ ಪಕ್ಷಿ ತಜ್ಞ ದರ್ಶನ್ ದೇಸಾಯಿ ಮಾತನಾಡಿ, "ಕಳೆದ ಐದು ವರ್ಷಗಳಿಂದ ಹೆಚ್ಚಿನ ರಾಜಹಂಸಗಳು ಸೂರತ್‌ಗೆ ಬರುತ್ತಿವೆ. ಈ ನಗರವನ್ನು ಈಗ ಗ್ರೇಟರ್ ಫ್ಲೆಮಿಂಗೊದ ದೊಡ್ಡ ವಾಸಕೇಂದ್ರ ಮತ್ತು ಸಂತಾನೋತ್ಪತ್ತಿ ಸ್ಥಳವಾಗಿಯೂ ನೋಡಲಾಗುತ್ತಿದೆ. ರಾಜಹಂಸ ಸಾಮಾನ್ಯವಾಗಿ ಉಪ್ಪುನೀರು ಮತ್ತು ನೀರು ಕಡಿಮೆ ಇರುವಲ್ಲಿ ವಾಸಿಸುವ ಪಕ್ಷಿಯಾಗಿದೆ. ಆಳವಿಲ್ಲದ ನೀರಿನಲ್ಲಿ ಇವು ಪಾಚಿಗಳನ್ನು ತಿಂದು ಜೀವಿಸುತ್ತವೆ. ಕಡಿಮೆ ನೀರು ಇರುವಲ್ಲೆಲ್ಲ ಹೋಗಲು ಇಷ್ಟಪಡುತ್ತವೆ" ಎಂದು ತಿಳಿಸಿದರು.
"ಈ ಸುರ್ಖಾಬ್‌ನ ವಿಶೇಷತೆಯೆಂದರೆ, ಸಂತಾನೋತ್ಪತ್ತಿಗಾಗಿ ಬರುವ ಪಕ್ಷಿಗಳು ಹಾಗು ಇತರವುಗಳು ಪ್ರತ್ಯೇಕ ಗುಂಪುಗಳಾಗಿ ಕಂಡುಬರುತ್ತವೆ. ಈ ಬಾರಿ ಸೂರತ್‌ನಲ್ಲಿ ಎರಡೂ ರೀತಿಯ ಗುಂಪುಗಳು ಕಾಣಿಸಿಕೊಂಡಿವೆ. ಆದ್ದರಿಂದ ಈ ಬೆಳವಣಿಗೆಯನ್ನು ನಾವು ಸಾಮಾನ್ಯವಾಗಿ ಊಹಿಸಲು ಸಾಧ್ಯವಿಲ್ಲ. ತುಂಬಾ ಸೌಮ್ಯ ಸ್ವಭಾವ ಮತ್ತು ನೋಡಲು ಸುಂದರವಾಗಿವೆ. ಇವುಗಳಿಗೆ ಹಾನಿಯಾಗದಂತೆ ವಿಶೇಷ ಕಾಳಜಿ, ಎಚ್ಚರಿಕೆ ವಹಿಸಬೇಕು" ಎಂದು ಅವರು ಸಲಹೆ ನೀಡಿದರು.
ಇದನ್ನೂ ಓದಿ: ಆಲಮಟ್ಟಿ ಹಿನ್ನೀರಿನಲ್ಲಿ ಹಕ್ಕಿಹಬ್ಬ: ನೂರಕ್ಕೂ ಹೆಚ್ಚು ಪಕ್ಷಿ ಪ್ರೇಮಿಗಳು ಭಾಗಿ