ನಲ್ಗೊಂಡ(ತೆಲಂಗಾಣ): ನಲ್ಗೊಂಡ ಜಿಲ್ಲೆಯ ಮಿರ್ಯಾಲಗುಡದ ಅಡ್ಡಂಕಿ-ನಾರ್ಕಟ್‌ಪಲ್ಲಿ ಮುಖ್ಯರಸ್ತೆಯಲ್ಲಿ ಭಾನುವಾರ-ಸೋಮವಾರದ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಅಪರಿಚಿತ ಲಾರಿ ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಎರಡು ಕುಟುಂಬಗಳ ಐವರು ಸಾವನ್ನಪ್ಪಿದ್ದಾರೆ.
ಮಿರ್ಯಾಲಗೂಡಿನ ನಂದಿಪಾಡು ಕಾಲೊನಿಯ ನಿವಾಸಿಗಳಾದ ಚೆರುಪಳ್ಳಿ ಮಹೇಶ್ (32), ಪತ್ನಿ ಜ್ಯೋತಿ (30), ಪುತ್ರಿ ರಿಷಿತಾ (6), ಸಂಬಂಧಿಯಾದ ಯಾದಾದ್ರಿ ಭುವನಗಿರಿ ಜಿಲ್ಲೆಯ ವಾಲಿಗೊಂಡ ತಾಲೂಕಿನ ಗೊಳ್ನೆಪಲ್ಲಿಯ ಭೂಮಾ ಮಹೇಂದರ್ ಹಾಗೂ ಪುತ್ರ ಲಿಯಾನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮಹೇಂದರ್ ಅವರ ಪತ್ನಿ ಮಾಧವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಿರ್ಯಾಲಗುಡ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ನ ಆಸ್ಪತ್ರೆಗೆ ರವಾನಿಸಲಾಗಿದೆ.
ಮಿರ್ಯಾಲಗುಡದ ಎರಡನೇ ನಗರ ಪೊಲೀಸ್ ಠಾಣೆಯ ಎಸ್ಐ ಕೃಷ್ಣಯ್ಯ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಇದೊಂದು ಹಿಟ್ ಆ್ಯಂಡ್ ರನ್ ಪ್ರಕರಣ. ಕಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಹೋದ ಲಾರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜನವರಿ 26ರಂದು ಮಹೇಶ್ ಮತ್ತು ಮಹೇಂದರ್ ಕುಟುಂಬದವರು ವಿಜಯವಾಡ ಬಳಿಯ ಮೋಪಿದೇವಿಗೆ ತೆರಳಿ ವಾಪಸಾಗುತ್ತಿದ್ದರು. ಭಾನುವಾರ ರಾತ್ರಿ ಮನೆಗೆ ತೆರಳುತ್ತಿದ್ದರು. ಅಡ್ಡಂಕಿ-ನಾರ್ಕಟ್‌ಪಲ್ಲಿ ಮುಖ್ಯರಸ್ತೆ ತಲುಪಿದಾಗ ಹಿಂದಿನಿಂದ ಲಾರಿ ಗುದ್ದಿದೆ. ಒಂದು ವೇಲೆ ಅಲ್ಲೇ ತಿರುವು ಪಡೆದಿದ್ದರೆ ಮೂರ್ನಾಲ್ಕು ನಿಮಿಷಗಳಲ್ಲಿ ಮನೆ ತಲುಪುತ್ತಿದ್ದರು. ಆದರೆ ಅಷ್ಟರಲ್ಲಿ ಲಾರಿ ಯಮಸ್ವರೂಪಿಯಾಗಿ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚೆರುಪಳ್ಳಿ ಮಹೇಶ್ ಹೈದರಾಬಾದ್‌ನ ವನಸ್ಥಲಿಪುರಂನಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ಎರಡೂ ಕುಟುಂಬಗಳ ಸಂಬಂಧಿಕರು ಮಿರ್ಯಾಲಗುಡ್ಡ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದು, ಸಂಬಂಧಿಕರ ರೋದನೆ ಮುಗಿಲು ಮುಟ್ಟುವಂತಿತ್ತು.
ಇದನ್ನೂ ಓದಿ: ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟದಿಂದ ಮೂವರು ಸಾವು: ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ