ಬಿಜಾಪುರ(ಛತ್ತೀಸ್‌ಗಢ): ಜಿಲ್ಲೆಯಲ್ಲಿ ಸೋಮವಾರ ಐವರು ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ ಇಬ್ಬರ ತಲೆಗೆ ತಲಾ ₹1 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಛತ್ತೀಸ್‌ಗಢ ಪೊಲೀಸರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ತ್ಯಜಿಸಿದವರಲ್ಲಿ ಪೋಡಿಯಂ ಬುಧ್ರಿ ಎಂಬ ಓರ್ವ ಮಹಿಳೆಯೂ ಇದ್ದಾರೆ. ಈಕೆಯೊಂದಿಗೆ ಮಲ್ಲಂ ದೇವ ಮತ್ತು ಕರಟಮ್ ಹಿದ್ಮಾ ಸೇರಿದಂತೆ ಒಟ್ಟು ಐವರು ರಕ್ತಪಾತದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಲ್ಲಂ ಗೋಲಪಲ್ಲಿ ಎಂಬಾತ ಸ್ಥಳೀಯ ಸಂಘಟನೆಯ ಸ್ಕ್ವಾಡ್‌ನ ಸದಸ್ಯನಾಗಿದ್ದರೆ, ಹಿದ್ಮಾ ಎಂಬಾತ ನಿಷೇಧಿತ ಮಾವೋವಾದಿ ಸಂಘಟನೆಯ ಸಿಂಗ್‌ಗ್ರಾಮ್ ಆರ್‌ಪಿಸಿ ಅಡಿಯಲ್ಲಿ ಡಿಎಕೆಎಂಎಸ್‌ನ ಅಧ್ಯಕ್ಷನಾಗಿದ್ದ. ಈ ಇಬ್ಬರ ಪತ್ತೆಗೆ ಶೋಧ ನಡೆಸುತ್ತಿದ್ದ ಪೊಲೀಸರು, ಸುಳಿವು ನೀಡಿದವರಿಗೆ ತಲಾ ಒಂದು ಲಕ್ಷ ರೂಪಾಯಿ ಘೋಷಿಸಿದ್ದರು.
ಪೋಡಿಯಂ ಬುಧ್ರಿ ಆರ್‌ಪಿಸಿ ಕ್ರಾಂತಿಕಾರಿ ಬುಡಕಟ್ಟು ಮಹಿಳಾ ಸಂಘಟನೆ (ಕೆಎಎಂಎಸ್) ಸದಸ್ಯರಾಗಿದ್ದರು. ಶರಣಾಗತರಾದ ನಕ್ಸಲೀಯರಿಗೆ ಸರ್ಕಾರದ ಪುನರ್ವಸತಿ ನೀತಿಯಡಿ ನೆರವು ನೀಡಲಾಗುವುದು. ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಇದು ಮಹತ್ವದ ಯಶಸ್ಸು ಎಂದು ಬಿಜಾಪುರ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಭಾರತದೊಳಗೆ ನುಸುಳಿದ 7 ಬಾಂಗ್ಲಾದೇಶಿಯರು, ಇಬ್ಬರು ರೋಹಿಂಗ್ಯಾಗಳ ಬಂಧನ - Bangladeshis Infiltrating India