ಸಂಗಾರೆಡ್ಡಿ(ತೆಲಂಗಾಣ): ಜಿಲ್ಲೆಯ ಹತ್ನೂರ ತಾಲೂಕಿನ ಚಂದಾಪುರ ಎಂಬಲ್ಲಿರುವ ಎಸ್‌ಬಿ ಆರ್ಗಾನಿಕ್ಸ್ ಕಾರ್ಖಾನೆಯಲ್ಲಿ ಇಂದು ರಿಯಾಕ್ಟರ್ ಸ್ಫೋಟಗೊಂಡು, ಬೆಂಕಿ ಆವರಿಸಿ ಕಟ್ಟಡಗಳು ನಾಶವಾಗಿವೆ. ಘಟನೆಯಲ್ಲಿ ಉದ್ಯಮದ ನಿರ್ದೇಶಕ ರವಿ ಸೇರಿದಂತೆ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇತರೆ ಹತ್ತು ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವಘಡ ಸಂಭವಿಸಿದ ತಕ್ಷಣ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ನರಸಾಪುರ ಶಾಸಕಿ ಸುನೀತಾ ರೆಡ್ಡಿ ಮತ್ತು ಮೇದಕ್ ಬಿಜೆಪಿ ಸಂಸದ ರಘುನಂದನ್ ರಾವ್, ಸಂಗಾರೆಡ್ಡಿ ಜಿಲ್ಲಾ ಎಸ್ಪಿ ರೂಪೇಶ್, ಪತಂಚೆರು ಡಿಎಸ್ಪಿ ರವೀಂದರ್ ರೆಡ್ಡಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.