ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ನಂತರ ಸತತ ಆರು ಬಜೆಟ್ ಮಂಡಿಸಿರುವ ನಿರ್ಮಲಾ, ಇದೀಗ ದಾಖಲೆಯ ಏಳನೇ ಬಜೆಟ್ ಮಂಡಿಸುವ ಹೊಸ್ತಿಲಲ್ಲಿದ್ದಾರೆ. ಸಂಸತ್ತಿನಲ್ಲಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮಹಿಳಾ ಸಚಿವೆ ಎಂಬ ಹಿರಿಮೆ ಮಾತ್ರವಲ್ಲದೆ, ಅತಿ ಹೆಚ್ಚು ಬಾರಿ ಬಜೆಟ್ ಭಾಷಣ ಮಾಡಿದ ದಾಖಲೆಯೂ ನಿರ್ಮಲಾ ಅವರದ್ದೆಂಬುದು ವಿಶೇಷ.
ಮೊರಾರ್ಜಿ ದೇಸಾಯಿ 10 ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದರು. 1959 ಮತ್ತು 1963ರ ನಡುವೆ ಮತ್ತು 1967 ಮತ್ತು 1969ರ ನಡುವೆ ಅವರು ಬಜೆಟ್ ಮಂಡಿಸಿದ್ದರು. ಪಿ.ಚಿದಂಬರಂ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಒಂಬತ್ತು ಬಾರಿ ಬಜೆಟ್ ಮಂಡಿಸಿದ್ದಾರೆ. ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರಿಂದ ಸತತವಾಗಿ ಕೇಂದ್ರ ಬಜೆಟ್ ಮಂಡಿಸುವ ಹೊಸ ದಾಖಲೆ ಹೊಂದಿದ್ದಾರೆ.
ಹಾಗಿದ್ದರೆ, 1947ರಿಂದ 2024ರವರೆಗೆ ಬಜೆಟ್ ಮಂಡಿಸಿದ ಹಣಕಾಸು ಮಂತ್ರಿಗಳು ಯಾರೆಲ್ಲ?, ಅವರು ಎಷ್ಟು ಬಾರಿ ಬಜೆಟ್ ಮಂಡಿಸಿದ್ದಾರೆ ಗೊತ್ತೇ?.
ಹಣಕಾಸು ಸಚಿವರು | ಬಜೆಟ್ ಸಂಖ್ಯೆ |
ಮೊರಾರ್ಜಿ ದೇಸಾಯಿ | 10 |
ಪಿ.ಚಿದಂಬರಂ | 9 |
ಪ್ರಣಬ್ ಮುಖರ್ಜಿ | 8 |
ಸಿ.ಡಿ.ದೇಶ್ಮುಖ್ | 7 |
ಯಶ್ವಂತ್ ಸಿನ್ಹಾ | 7 |
ನಿರ್ಮಲಾ ಸೀತಾರಾಮನ್ | 6 |
ಮನಮೋಹನ್ ಸಿಂಗ್ | 6 |
ಯಶವಂತರಾವ್ ಬಿ.ಚವ್ಹಾಣ | 5 |
ಅರುಣ್ ಜೇಟ್ಲಿ | 5 |
ಟಿ.ಟಿ.ಕೃಷ್ಣಮಾಚಾರಿ | 4 |
ಆರ್.ವೆಂಕಟರಾಮನ್ | 3 |
ಹೆಚ್.ಎಂ.ಪಟೇಲ್ | 3 |
ಸಿ.ಸುಬ್ರಮಣ್ಯಂ | 2 |
ವಿ.ಪಿ.ಸಿಂಗ್ | 2 |
ಜಶ್ವಂತ್ ಸಿಂಗ್ | 2 |
ಆರ್.ಕೆ.ಷಣ್ಮುಖ ಶೆಟ್ಟಿ | 2 |
ಜಾನ್ ಮಥಾಯ್ | 2 |
ಜವಾಹರಲಾಲ್ ನೆಹರು | 1 |
ಸಚಿಂದ್ರ ಚೌಧರಿ | 1 |
ಇಂದಿರಾ ಗಾಂಧಿ | 1 |
ಚರಣ್ ಸಿಂಗ್ | 1 |
ಎನ್.ಡಿ.ತಿವಾರಿ | 1 |
ಶಂಕರರಾವ್ ಬಿ. ಚವ್ಹಾಣ | 1 |
ಮಧು ದಂಡವತೆ | 1 |
ಪಿಯೂಷ್ ಗೋಯಲ್ | 1 |
ಮಂಗಳವಾರ ಕೇಂದ್ರ ಬಜೆಟ್: ಕೇಂದ್ರ ಬಜೆಟ್-2024ರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಂಸತ್ತಿನ ಮಳೆಗಾಲದ ಅಧಿವೇಶನ ನಾಳೆ ಆರಂಭವಾಗಿ ಆಗಸ್ಟ್ 12ರವರೆಗೆ ನಡೆಯಲಿದೆ. ಸಾರ್ವತ್ರಿಕ ಚುನಾವಣೆಗಳು ಮುಗಿದು ಹೊಸ ಸರ್ಕಾರ ರಚನೆಯಾಗಿದ್ದು, 2024-25ನೇ ಹಣಕಾಸು ವರ್ಷದ ಉಳಿದ 8 ತಿಂಗಳ ಬಜೆಟ್ ಅನ್ನು ಸರ್ಕಾರ ಮಂಗಳವಾರ ಮಂಡಿಸುತ್ತದೆ. ಇದಕ್ಕೂ ಒಂದು ದಿನ ಮೊದಲು ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಲಿದ್ದಾರೆ.
ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದ ಸಚಿವೆ ಶೋಭಾ ಕರಂದ್ಲಾಜೆ - Shobha Karandlaje