ಲಖನೌ, ಉತ್ತರಪ್ರದೇಶ: ಮುಂಬೈಗೆ ತೆರಳಬೇಕಿದ್ದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಸಿಬ್ಬಂದಿ ಮತ್ತು ಸಹಪ್ರಯಾಣಿಕರೊಂದಿಗೆ ಜಗಳವಾಡಿ ಅವರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಮಂಗಳವಾರ ಲಖನೌದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಸಂಬಂಧ ಲಖನೌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ: ನಿನ್ನೆ ಸಂಜೆ ಮಹಿಳೆಯೊಬ್ಬರು ಲಖನೌದಿಂದ ಮುಂಬೈಗೆ ತೆರಳಲು QP 1525 ಆಕಾಸಾ ವಿಮಾನವನ್ನು ಏರಿದ್ದರು. ಈ ವೇಳೆ ಸಹಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿ ಜಗಳವಾಡಿದ್ದಾರೆ. ಇದನ್ನು ಕಂಡ ವಿಮಾನ ಸಿಬ್ಬಂದಿ ಈ ಬಗ್ಗೆ ವಿಚಾರಿಸಲು ತೆರಳಿದ್ದಾರೆ. ಆಗ ಈ ಮಹಿಳೆ ಸಿಬ್ಬಂದಿಗಳೊಂದಿಗೂ ಜಗಳವಾಡಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಶಾಂತವಾಗದ ಮಹಿಳೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಡಿಬೋರ್ಡ್ ಮಾಡಿ ವಿಮಾನದಿಂದ ಕೆಳಗಿಳಿಸಿದ್ದಾರೆ.
ಇಷ್ಟಾದರೂ ಸುಮ್ಮನಾಗದ ಮಹಿಳೆ ವಿಮಾನದೊಳಗೆ ಮರುಪ್ರವೇಶಿಸಲು ಯತ್ನಿಸಿದ್ದಾರೆ. ಇದನ್ನು ತಡೆದ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಮಹಿಳೆಯನ್ನು ಅವರಿಗೆ ಒಪ್ಪಿಸಿದ್ದಾರೆ.
ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504ರ ಅಡಿಯಲ್ಲಿ (ಉದ್ದೇಶಪೂರ್ವಕವಾಗಿ ಶಾಂತಿ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡುವ) ಪ್ರಕರಣವನ್ನು ದಾಖಲಿಸಲಾಗಿದೆ. ಮಹಿಳೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಂಟಿ ಪೊಲೀಸ್ ಕಮಿಷನರ್ ಕುಲ್ಹಾರಿ ಘಟನೆ ಬಗ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ವಿಮಾನದಲ್ಲಿ ದುರ್ವರ್ತನೆ ತೋರಿದ ಪ್ರಯಾಣಿಕ ಪೊಲೀಸ್ ವಶಕ್ಕೆ - Misbehavior on the plane