ಗಡ್ಚಿರೋಲಿ (ಮಹಾರಾಷ್ಟ್ರ): ಇದು ಆಡಳಿತ ವ್ಯವಸ್ಥೆಯ ವೈಫಲ್ಯವೋ?, ಜನರ ಹಟಮಾರಿ ಧೋರಣೆಯೋ ಎಂಬುದು ತಿಳಿಯುತ್ತಿಲ್ಲ. ಮೂಢನಂಬಿಕೆ ಮತ್ತು ಸೌಲಭ್ಯಗಳ ಕೊರತೆಗೆ ಇಬ್ಬರು ಮಕ್ಕಳ ಪ್ರಾಣ ಹಾರಿ ಹೋಗಿದೆ. ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗದ್ದಕ್ಕೆ ಕುಟುಂಬಸ್ಥರು ಮಕ್ಕಳಿಬ್ಬರನ್ನು ಹೆಗಲ ಮೇಲೆ ಹೊತ್ತುಕೊಂಡು 15 ಕಿಮೀ ದೂರ ಸಾಗಿದ್ದಾರೆ. ಈ ದುರದೃಷ್ಟಕರ ಘಟನೆ ನಡೆದಿದ್ದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ.
ಇಲ್ಲಿನ ಯರಂಗಡ ಪ್ರದೇಶದ ಇಬ್ಬರು ಮಕ್ಕಳು ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಮಕ್ಕಳು ಚಿಕಿತ್ಸೆ ಸ್ಪಂದಿಸದೇ ಒಬ್ಬರ ಹಿಂದೆ ಒಬ್ಬರು ಮೃತಪಟ್ಟರು. ವೈದ್ಯರು ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲು ಮುಂದಾದಾಗ, ಕುಟುಂಬಸ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಮಕ್ಕಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಯಿಂದ ಹೊರಹೋಗಿದ್ದಾರೆ.
ಘಟನೆಯ ವಿವರ: 6 ಮತ್ತು 3 ವರ್ಷದ ಇಬ್ಬರು ಮಕ್ಕಳಿಗೆ ತೀವ್ರ ಜ್ವರ ಬಾಧಿಸಿದೆ. ಕುಟುಂಬಸ್ಥರ ಮೂಢನಂಬಿಕೆ ಮತ್ತು ಹುಂಬತನದಿಂದ ಅವರನ್ನು ಪಾದ್ರಿಯ ಬಳಿಗೆ ಕರೆದುಕೊಂಡು ಹೋಗಲಾಗಿದೆ. ಆತ ಮಕ್ಕಳಿಗೆ ಯಾವುದೇ ಗಿಡಮೂಲಿಕೆ ಔಷಧ ನೀಡಿದ್ದಾನೆ. ಇದರಿಂದ ಮಕ್ಕಳ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ತಕ್ಷಣವೇ ಅವರನ್ನು ಜೀಮಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರ ಕರೆತಂದಿದ್ದಾರೆ. ಅಷ್ಟರೊಳಗೆ ಮಕ್ಕಳಿ ಸ್ಥಿತಿ ಚಿಂತಾಜನಕವಾಗಿತ್ತು.
ಮೊದಲು ಹಿರಿಯ ಪುತ್ರ ಸಾವನ್ನಪ್ಪಿದ್ದಾನೆ. ಬಳಿಕ ಒಂದೂವರೆ ಗಂಟೆಯ ನಂತರ ಕಿರಿಯ ಮಗನೂ ಪ್ರಾಣ ಬಿಟ್ಟಿದ್ದಾರೆ. ಇದರಿಂದ ಕುಟುಂಬ ಕಂಗೆಟ್ಟಿದೆ. ಆಸ್ಪತ್ರೆಯಲ್ಲಿನ ವೈದ್ಯರು ತಪಾಸಣೆ ನಡೆಸಿದರೂ, ಮಕ್ಕಳಿಗೆ ಆದ ಸಮಸ್ಯೆ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಆದರೆ, ಇದಕ್ಕೆ ಕುಟುಂಬಸ್ಥರು ಒಪ್ಪದೇ ಮಕ್ಕಳ ಶವ ತೆಗೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಆರೋಗ್ಯಾಧಿಕಾರಿಗಳು ಕುಟುಂಬಸ್ಥರ ಮನವೊಲಿಸಲು ಪ್ರಯತ್ನಿಸಿದರೂ, ಅವರು ಸುತಾರಾಂ ಒಪ್ಪಿಕೊಂಡಿಲ್ಲ.
ಗ್ರಾಮಕ್ಕೆ ರಸ್ತೆ ಇಲ್ಲ: ಮೃತ ಮಕ್ಕಳ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ವಾಹನ ಸಂಚಾರ ಕಷ್ಟಕರವಾಗಿದೆ. ಶವ ಸಾಗಿಸುವ ಆಂಬ್ಯುಲೆನ್ಸ್ ಸಮಯಕ್ಕೆ ದೊರಕಿಲ್ಲ. ಇತ್ತ ವೈದ್ಯರು ಮರಣೋತ್ತರ ಪರೀಕ್ಷೆಗೆ ಸೂಚಿಸಿದಾಗ, ಕುಟುಂಬಸ್ಥರು ಮಕ್ಕಳು ಶವವನ್ನು ಹೆಗಲ ಮೇಲೆ ಹಾಕಿಕೊಂಡು ಗ್ರಾಮದತ್ತ ಸಾಗಿದ್ದಾರೆ. ಮಾರ್ಗಮಧ್ಯೆ ಯಾವುದೇ ವಾಹನ ಸಿಗದ ಕಾರಣ 15 ಕಿಮೀ ಶವವನ್ನು ಹೊತ್ತುಕೊಂಡೇ ಸಾಗಿಬಂದಿದ್ದಾರೆ. ಬಳಿಕ ಕುಟುಂಬದ ಇತರರು ಬೈಕ್ ತಂದ ಬಳಿಕ ಅದರ ಮೇಲೆ ಶವವನ್ನು ಸಾಗಿಸಿದ್ದಾರೆ. ಗ್ರಾಮಕ್ಕೆ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಶಾಶ್ವತ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಲು ಕೋರಿದ್ದಾರೆ.
ಇದನ್ನೂ ಓದಿ: ಕೋಟಾದಲ್ಲಿ ಮತ್ತೊಬ್ಬ ನೀಟ್ ವಿದ್ಯಾರ್ಥಿ ಆತ್ಮಹತ್ಯೆ: ಇದು ಈ ವರ್ಷದ 15ನೇ ಪ್ರಕರಣ! - Medical Aspirant Suicide