ಚಂಡಿಗಢ( ಪಂಜಾಬ್): ದೆಹಲಿ ಚಲೋದಲ್ಲಿ ರೈತರು ಪಾಲ್ಗೊಳದಂತೆ ತಡೆಯಲು ಪಂಜಾಬ್‌ನ ಅಂಬಾಲಾ - ಶಂಭು ಗಡಿಯ ಹೆದ್ದಾರಿಯಲ್ಲಿ ಹಾಕಿದ್ದ ತಡೆಗೋಡೆಯನ್ನು ರೈತರು ದ್ವಂಸ ಮಾಡಿ ಘಗ್ಗರ್ ನದಿಗೆ ಎಸೆದಿದ್ದಾರೆ. ತಡರಾತ್ರಿ ಟ್ರ್ಯಾಕ್ಟರ್ಗಳಲ್ಲಿ ಹೊರಟಿದ್ದ ರೈತರಿಗೆ ಅಂಬಾಲಾ - ಶಂಭು ಗಡಿಯಲ್ಲಿ ತಡೆಯಾಗಿತ್ತು. ಈ ವೇಳೆ, ಸ್ಥಳೀಯ ಗ್ರಾಮಸ್ಥರು ಹಾಗೂ ರೈತರು ಸೇರಿ ಸಿಮೆಂಟ್ ಬ್ಲಾಕ್‌ಗಳನ್ನು ನದಿಗೆ ಉರುಳಿಸಿದ್ದಾರೆ.
ಬಳಿಕ ಘಗ್ಗರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ದಾಟಿ ರೈತರು ಮುಂದೆ ಸಾಗಿದ್ದಾರೆ. ಆದರೆ, ಹರಿಯಾಣದ ಗಡಿಗೆ ಬರುವುದು ಇನ್ನು ಕಠಿಣ ಸವಾಲಾಗಿದೆ. ಹಲವು ದಿನಗಳಿಂದ ರೈತ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ 'ದೆಹಲಿ ಚಲೋ' ಹೋರಾಟ ಮುಂದುವರೆದಿದ್ದು, ಪಂಜಾಬ್‌ನ ಗಡಿಯಲ್ಲಿರುವ ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದರೆ, ರಸ್ತೆಗಳ ಮೇಲೆ ಕಬ್ಬಿಣದ ಮೊಳೆಗಳು ಮತ್ತು ಮುಳ್ಳುತಂತಿಗಳನ್ನು ಅಳವಡಿಸಲಾಗಿದೆ. ಇದರಿಂದ ರೈತರ ಟ್ರ್ಯಾಕ್ಟರ್ಗಳು ದೆಹಲಿಗೆ ಪ್ರವೇಶಿಸದಂತೆ ತಡೆ ಒಡ್ಡಲಾಗುತ್ತಿದೆ. ಈ ಮಧ್ಯೆ ದೆಹಲಿ ಚಲೋ ಬೆಂಬಲಿಸಿ ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಬರುತ್ತಿರುವ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಹರಿಯಾಣ, ಪಂಜಾಬ್, ದೆಹಲಿಯ ಸಿಂಘು, ಘಾಜಿಪುರ್ ಮತ್ತು ಟಿಕ್ರಿ ಗಡಿಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೋರಾಟಗಾರರ ಮೇಲೆ ಕಣ್ಣಿಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಹರಿಯಾಣದ 15 ಜಿಲ್ಲೆಗಳಲ್ಲಿ ಜನರು ಗುಂಪು ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ದೆಹಲಿಯಲ್ಲಿ ಒಂದು ತಿಂಗಳು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕೇಂದ್ರ ಸಚಿವರ- ರೈತರ ನಡುವಿನ ಸಭೆ ವಿಫಲ : ಚಂಡೀಗಢದಲ್ಲಿ ಸೋಮವಾರ ರಾತ್ರಿಯಿಂದ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಅವರೊಂದಿಗೆ ರೈತ ಮುಖಂಡರು, 6 ಗಂಟೆಗಳ ಕಾಲ ಮಾತುಕತೆ ನಡೆಸಿದರು. ಪ್ರಮುಖ ಬೇಡಿಕೆಗಳಾದ ಎಂಎಸ್‌ಪಿಗೆ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ಈ ಹಿಂದಿನ ಹೋರಾಟದ ವೇಳೆ ರೈತರ ಮೇಲೆ ಹಾಕಲಾದ ಪ್ರಕರಣಗಳನ್ನು ಹಿಂಪಡೆಯುವುದು, ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಕುರಿತು ಯಾವುದೇ ಅಂತಿಮ ನಿರ್ಧಾರಗಳು ಹೊರಬೀಳದ ಹಿನ್ನೆಲೆಯಲ್ಲಿ ಮಾತುಕತೆ ವಿಫಲವಾಗಿದೆ.
ಇದನ್ನೂ ಓದಿ : ದೆಹಲಿ ಚಲೋ ಚಳವಳಿ: ಇಂದಿನಿಂದ ತಿಂಗಳವರೆಗೆ ದೆಹಲಿಯಲ್ಲಿ 144 ಸೆಕ್ಷನ್ ಜಾರಿ