ಚಂಡೀಗಢ: ಪಂಜಾಬ್‌ನ ಶಂಭು ಗಡಿ ಮತ್ತು ಖಾನೌರಿ ಗಡಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನ ಬೆಂಬಲಿಸಿ ಇಂದು 3 ಗಂಟೆಗಳ ಕಾಲ ರೈಲುಗಳ ತಡೆ ನಡೆಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ 48 ಸ್ಥಳಗಳಲ್ಲಿ ರೈತರು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ಮಾಡಲಿದ್ದಾರೆ. ಅಮೃತಸರ, ಜಲಂಧರ್ ಮತ್ತು ಹೋಶಿಯಾರ್‌ಪುರ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ರೈತರ ಟ್ರ್ಯಾಕ್‌ಗಳನ್ನು ನಿರ್ಬಂಧಿಸಲಾಗಿದೆ. ಡಿಸೆಂಬರ್ 14 ರಂದು ರೈತ ಮುಖಂಡ ಸರ್ವಾನ್ ಪಂಧೇರ್ ರೈಲ್ ರೋಕೋ ಆಂದೋಲನ ಘೋಷಿಸಿದ್ದರು.
ತುರ್ತು ಸಭೆ ಕರೆದ ಸಂಯುಕ್ತ ಕಿಸಾನ್ ಮೋರ್ಚಾ: ಖಾನೌರಿ ಗಡಿಯಲ್ಲಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆಮರಣಾಂತ ಉಪವಾಸಕ್ಕೆ ಸಂಬಂಧಿಸಿದಂತೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಇಂದು ತುರ್ತು ಸಭೆ ಕರೆದಿದೆ. ಚಂಡೀಗಢದ ಕಿಸಾನ್ ಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ಈ ಸಭೆ ನಡೆಯಲಿದೆ. ದಲ್ಲೆವಾಲ್ ಅವರ ಹೋರಾಟಕ್ಕೆ ಬೆಂಬಲ ಘೋಷಿಸುವ ಸಾಧ್ಯತೆ ಇದೆ. ಸಭೆ ಬಳಿಕ ಸಂಜೆ 7 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ. ಈ ಹಿಂದೆ ಡಿಸೆಂಬರ್ 24 ರಂದು ಈ ಸಭೆ ನಡೆಯಬೇಕಿದ್ದರೂ, ರೈತ ಮುಖಂಡ ಜಗಜಿತ್ ದಲ್ಲೆವಾಲ್ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಭೆಯ ಸಮಯವನ್ನು ಬದಲಾವಣೆ ಮಾಡಲಾಗಿತ್ತು.
ಮತ್ತೊಂದೆಡೆ ಹೈಪವರ್ ಸಮಿತಿಯು ಪಂಚಕುಲದಲ್ಲಿ ಇಂದೇ ರೈತರ ಸಭೆಗೆ ಕರೆದಿತ್ತು. ಆದರೆ, ರೈತರು ಸಮಿತಿಗೆ ಪತ್ರ ಬರೆದು ಸಭೆಗೆ ಹಾಜರಾಗಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಮಾತ್ರವೇ ನಾವು ಮಾತನಾಡುತ್ತೇವೆ ಎಂಬುದು ರೈತ ಸಂಘಟನೆಗಳ ಸ್ಪಷ್ಟವಾದ ನುಡಿಯಾಗಿದೆ.
ಜಗಜಿತ್ ಸಿಂಗ್ ದಲ್ಲೆವಾಲ್ ಆಮರಣ ಉಪವಾಸ: ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆಮರಣ ಉಪವಾಸ ಸತ್ಯಾಗ್ರಹಕ್ಕೆ ಇಂದು 23ನೇ ದಿನ. ಮಂಗಳವಾರ ಆರೋಗ್ಯ ಹದಗೆಟ್ಟ ಕಾರಣ ಅವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ವೈದ್ಯರ ಪ್ರಕಾರ, ದಲ್ಲೆವಾಲ್ ಅವರ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತಿದೆ. ಅವರ ದೃಷ್ಟಿಯಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ. ಅವರು ಏನನ್ನೂ ತಿನ್ನುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಡಾಕ್ಟರ್ಸ್ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
ಇದನ್ನು ಓದಿ: ದೆಹಲಿ ವಿವಿ ಕಾನೂನು ವಿಭಾಗದಲ್ಲಿ ಬೃಹತ್ ಪ್ರತಿಭಟನೆ: ಪೊಲೀಸ್ - ವಿದ್ಯಾರ್ಥಿಗಳ ನಡುವೆ ಘರ್ಷಣೆ