ಬರೇಲಿ(ಉತ್ತರ ಪ್ರದೇಶ): ಮಹಿಳೆಯೊಬ್ಬರು ಸುಳ್ಳು ಸಾಕ್ಷ್ಯ ನೀಡಿದ್ದರಿಂದ ಅಮಾಯಕ ಯುವಕ 4 ವರ್ಷ, 6 ತಿಂಗಳು ಮತ್ತು 13 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾನೆ. ತನ್ನ ಮಗಳಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾಗಿ ಯುವಕನ ವಿರುದ್ಧ ಮಹಿಳೆ ಪ್ರಕರಣ ದಾಖಲಿಸಿದ್ದಳು. ನಂತರ, ಸಂತ್ರಸ್ತೆಯೇ ತನ್ನ ಹೇಳಿಕೆಯನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಯುವಕನನ್ನು ಗೌರವಯುತವಾಗಿ ಕೋರ್ಟ್ ದೋಷಮುಕ್ತಗೊಳಿಸಿದೆ. ಮಹಿಳೆಯ ವಿರುದ್ಧ ನ್ಯಾಯಾಲಯದ ದಾರಿ ತಪ್ಪಿಸಿದ ಆರೋಪದಡಿ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಜ್ಞಾನೇಂದ್ರ ತ್ರಿಪಾಠಿ ಇದೀಗ ಐತಿಹಾಸಿಕ ತೀರ್ಪು ನೀಡಿದ್ದಾರೆ. ಅಮಾಯಕ ಯುವಕ ಎಷ್ಟು ದಿನ ಜೈಲಿನಲ್ಲಿ ಕಳೆದಿದ್ದನೋ ಅಷ್ಟೇ ದಿನಗಳನ್ನು ಮಹಿಳೆಯೂ ಜೈಲಿನಲ್ಲಿ ಕಳೆಯಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಇದಲ್ಲದೇ 5,88,822 ರೂ. ದಂಡವನ್ನೂ ವಿಧಿಸಿದ್ದಾರೆ. ಈ ದಂಡ ಪಾವತಿಸದೇ ಇದ್ದಲ್ಲಿ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶಿಸಿದ್ದಾರೆ.
ಪ್ರಕರಣದ ಬಗ್ಗೆ ಸಹಾಯಕ ಜಿಲ್ಲಾ ಸರ್ಕಾರಿ ವಕೀಲ ಸುನೀಲ್ ಪಾಂಡೆ ಮಾತನಾಡಿ, ''ಬರದರಿ ಪ್ರದೇಶದ ಮಹಿಳೆಯೊಬ್ಬರು ಡಿಸೆಂಬರ್ 2, 2019ರಂದು ಬರದರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ ಯುವಕ ತನ್ನ 15 ವರ್ಷದ ಮಗಳನ್ನು ಆಮಿಷವೊಡ್ಡಿ ದೆಹಲಿಗೆ ಕರೆದೊಯ್ದಿದ್ದ. ಅಲ್ಲಿ ಆಕೆಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿದ್ದರು. ಇದಾದ ಬಳಿಕ ಈ ಪ್ರಕರಣದಲ್ಲಿ ಯುವಕ ಜೈಲು ಪಾಲಾಗಿದ್ದನು. ಮುಂದಿನ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇತ್ತು. ಈ ಅವಧಿಯಲ್ಲಿ ಯುವಕ 4 ವರ್ಷ, 6 ತಿಂಗಳು ಮತ್ತು 13 ದಿನಗಳವರೆಗೆ (ಒಟ್ಟು 1,653 ದಿನಗಳು) ಜೈಲಿನಲ್ಲೇ ಇದ್ದ. ಈ ಹಿಂದೆ ತನ್ನ ಹೇಳಿಕೆಯಲ್ಲಿ ಬಾಲಕಿ ಯುವಕನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಳು. ನಂತರ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಆರೋಪಿ ತನ್ನ ಜೊತೆಗೆ ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಳು. ತನ್ನನ್ನು ದೆಹಲಿಗೂ ಕರೆದುಕೊಂಡು ಹೋಗಿಲ್ಲ ಎಂದಿದ್ದಳು. 8 ಫೆಬ್ರವರಿ 2024ರಂದು ನೀಡಿದ ಹೇಳಿಕೆಯನ್ನು ಪರಿಗಣಿಸಿ ಅಮಾಯಕನಿಗೆ ನೀಡಿದ್ದ ಶಿಕ್ಷೆಯನ್ನು ಕೋರ್ಟ್ ರದ್ದುಗೊಳಿಸಿದೆ" ಎಂದು ಮಾಹಿತಿ ನೀಡಿದರು.
ಅಮಾಯಕ ಯುವಕನನ್ನು ಗೌರವಯುತವಾಗಿ ಖುಲಾಸೆಗೊಳಿಸಲಾಗಿದೆ. ಶನಿವಾರ ನಡೆದ ವಿಚಾರಣೆ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜ್ಞಾನೇಂದ್ರ ತ್ರಿಪಾಠಿ ಐತಿಹಾಸಿಕ ತೀರ್ಪು ನೀಡಿದರು. ಮಹಿಳೆಯ ಸುಳ್ಳು ಹೇಳಿಕೆಗಳಿಂದಾಗಿ ಅಮಾಯಕ 1,653 ದಿನ ಜೈಲು ವಾಸ ಅನುಭವಿಸಬೇಕಾಯಿತು. ಅಷ್ಟೇ ದಿನಗಳನ್ನು ಮಹಿಳೆಯೂ ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.