ನವದೆಹಲಿ: ಕಳೆದೆರಡು ವಾರಗಳಿಂದ ಶಾಖದ ಅಲೆಗೆ ತತ್ತರಿಸಿರುವ ವಾಯುವ್ಯ ಮತ್ತು ಮಧ್ಯ ಭಾರತದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲೂ ಕೂಡ ಬಿಸಿಲಿನ ಝಳ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ವಿಪರೀತ ತಾಪಮಾನಕ್ಕೆ ಈಗಾಗಲೇ ಹೀಟ್ ಸ್ಟ್ರೋಕ್ನಿಂದಾಗಿ 47 ಜನರು ಸಾವನ್ನಪ್ಪಿದ್ದಾರೆ. ಬಿಹಾರ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ 47 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಶಾಖದ ಅಲೆಗೆ ಬಿಹಾರದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದಾರೆ.
ಒಡಿಶಾದಲ್ಲಿ ಬಿಸಿಲ ಬೇಗೆಗೆ 10 ಅನಾಹುತಗಳು ಸಂಭವಿಸಿವೆ. ರೌರ್ಕೆಲ್ ನಗರದಲ್ಲಿ ಶಾಖದಲೆಯಿಂದ ಅನೇಕ ಸಾವುಗಳು ಸಂಭವಿಸಿವೆ. ಈ ಕುರಿತು ಮಾತನಾಡಿರುವ ರೌರ್ಕೆಲ್ ಸರ್ಕಾರಿ ಆಸ್ಪತ್ರೆಯ ಡಾ.ಸುಧಾರಾಣಿ ಪ್ರಧಾನ್, ಆರು ಗಂಟೆ ಅವಧಿಯಲ್ಲಿಯೇ ಎರಡು ಸಾವು ಸಂಭವಿಸಿದೆ. ಸಾಮಾನ್ಯವಾಗಿ ದೇಹ ತಾಪಮಾನ 103-104 ಡಿಗ್ರಿ ಫ್ಯಾರನ್ಹಿಟ್ ಇರಬೇಕು. ಆದರೆ, ಹವಾಮಾನ ಪರಿಸ್ಥಿತಿಯಿಂದ ಅತಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದರು.
ರಾಜಸ್ಥಾನದಲ್ಲಿ ಸುಡು ಬಿಸಿಲಿಗೆ 8 ಮಂದಿ ಸಾವನ್ನಪ್ಪಿದ್ದಾರೆ. ಜಾರ್ಖಂಡ್ನ ಪಾಲಮು ಜಿಲ್ಲೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 47.4 ಡಿಗ್ರಿ ಸೆಲ್ಸಿಯಸ್ ತಾಪ ದಾಖಲಾಗಿದೆ. ಪಂಜಾಬ್, ಹರಿಯಾಣ, ಚಂಡೀಗಢ, ಜಾರ್ಖಂಡ್, ಒಡಿಶಾ ಮತ್ತು ಬಿಹಾರದ ಪ್ರತ್ಯೇಕ ಸ್ಥಳಗಳಲ್ಲಿ ಶಾಖದಲೆಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ
ದೆಹಲಿ ಮತ್ತು ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಾಯುವ್ಯ ದೆಹಲಿಯ ಮುಂಗೇಶ್‌ಪುರದಲ್ಲಿ 52.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಈ ಹಿಂದಿನ ದಾಖಲೆಗಳನ್ನು ಮುರಿದಿದೆ. 1944ರಲ್ಲಿ ಇಲ್ಲಿ 47.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.(ಐಎಎನ್ಎಸ್)
ಇದನ್ನೂ ಓದಿ: ಬಿಹಾರದಲ್ಲಿ 24 ತಾಸಲ್ಲಿ ಬಿಸಿಲ ತಾಪಕ್ಕೆ 19 ಮಂದಿ ಸಾವು, ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ