ಅಲ್ವಾರ್(ರಾಜಸ್ಥಾನ): ಅಲ್ವಾರ್ನಲ್ಲಿ ಹಾದುಹೋಗುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಕೇಂದ್ರ ಸಚಿವ ದಿ.ಜಸ್ವಂತ್ ಸಿಂಗ್ ಅವರ ಸೊಸೆ ಚಿತ್ರಾ ಸಿಂಗ್ ಸಾವನ್ನಪ್ಪಿದ್ದಾರೆ.
ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಮತ್ತು ಅವರ ಕುಟುಂಬ ದೆಹಲಿಯಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಅಪಘಾತ ಘಟಿಸಿದೆ. ನೌಗಾವಾ ಸಮೀಪದ ಎರಡು ಎತ್ತರದ ರಸ್ತೆಗಳ ನಡುವಿನ ಖಾಲಿ ಜಾಗದಲ್ಲಿ ಚಾಲಕ ನರೇಂದ್ರ ಅವರ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆಯಿಂದ ಸ್ಕಿಡ್ ಆಗಿ ಸಿಮೆಂಟ್ ಪ್ಯಾರಪೆಟ್‌ಗೆ ಡಿಕ್ಕಿ ಹೊಡೆಯಿತು. ಈ ಸಂದರ್ಭದಲ್ಲಿ ಎಸ್‌ಯುವಿಯಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅಲ್ವಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಪಾಲ್ ಸಿಂಗ್ ಮಾಹಿತಿ ನೀಡಿದರು.
ಚಿಕಿತ್ಸೆ ಫಲಕಾರಿಯಾಗದೆ ಚಿತ್ರಾ ಸಿಂಗ್ (55 ವರ್ಷ) ಸಾವನ್ನಪ್ಪಿದ್ದು, ಪತಿ ಮಾನವೇಂದ್ರ ಸಿಂಗ್ (59), ಅವರ ಮಗ ಹಮೀರ್ ಸಿಂಗ್ (25) ಮತ್ತು ಚಾಲಕ ಗಾಯಗೊಂಡಿದ್ದಾರೆ. ಮಾನವೇಂದ್ರ ಸಿಂಗ್ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಡಾ.ವಿಕ್ರಾಂತ್ ಸೋಲಂಕಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರ ನಾಯಕರು ಘಟನೆಗೆ ದುಃಖ ವ್ಯಕ್ತಪಡಿಸಿದ್ದಾರೆ.
ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ ಗೆಹ್ಲೋಟ್, "ಮನ್ವೇಂದ್ರ ಸಿಂಗ್ ಅವರ ಪತ್ನಿ ಚಿತ್ರಾ ಸಿಂಗ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬಕ್ಕೆ ಧೈರ್ಯ ನೀಡೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಈ ಘಟನೆ ಆಘಾತಕಾರಿಯಾಗಿದೆ ಎಂದು ಸತೀಶ್ ಪೂನಿಯಾ ಹೇಳಿದ್ದಾರೆ. ಚಿತ್ರಾ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಬಾರ್ಮರ್‌ನ ಮಾಜಿ ಸಂಸದ ಮನ್ವೇಂದ್ರ ಸಿಂಗ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ ವಿರುದ್ಧ ಝಲ್ರಾಪಟನ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಮಾನವೇಂದ್ರ ಸಿಂಗ್ ತಂದೆ ಜಸ್ವಂತ್ ಸಿಂಗ್ 2020ರಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ ಗೆದ್ದ ಬಿಜೆಪಿ: ಹೈಕೋರ್ಟ್ ಮೊರೆ ಹೋದ ಎಎಪಿ-ಕಾಂಗ್ರೆಸ್