ನವದೆಹಲಿ: ಹೊಸ ಪಿಂಚಣಿ ಯೋಜನೆಯ ಬಗೆಗಿನ ದೀರ್ಘಕಾಲದ ವಿವಾದದ ಮಧ್ಯೆ, ಇಂದು ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎನ್ಪಿಎಸ್ಗೆ ಸಂಬಂಧಿಸಿದಂತೆ, ಯೋಜನೆಯ ಬಗೆಗಿನ ಸಮಸ್ಯೆಗಳನ್ನು ನಿವಾರಿಸುವಂತಹ ಹಾಗೂ ಹಣಕಾಸಿನ ನಿರ್ವಹಣೆಗೆ ಸಹಾಯವಾಗುವಂತಹ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ.
ಕಳೆದ ವರ್ಷ ಹಣಕಾಸು ಸಚಿವಾಲಯವು, ಸರ್ಕಾರಿ ನೌಕರರಿಗೆ ಪಿಂಚಣಿ ಯೋಜನೆ ಬಗೆಗಿನ ವಿವಾದಗಳ ಕುರಿತು ಪರಿಶೀಲಿಸಲು ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯ ಅಸ್ತಿತ್ವದಲ್ಲಿರುವ ಚೌಕಟ್ಟು ಹಾಗೂ ರಚನೆಯ ಬಗ್ಗೆ ಯಾವುದೇ ಬದಲಾವಣೆಗಳು ಅಗತ್ಯವಿದ್ದಲ್ಲಿ ಸೂಚಿಸಲು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು.
ಹಲವಾರು ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳು ಹಾಗೂ ಇನ್ನೂ ಕೆಲವು ರಾಜ್ಯಗಳಲ್ಲಿನ ಉದ್ಯೋಗಿ ಸಂಘ ಸಂಸ್ಥೆಗಳು ಡಿಎ - ಲಿಂಕ್ಡ್ ಹಳೆಯ ಪಿಂಚಣಿ ಯೋಜನೆಯನ್ನೇ (ಒಪಿಎಸ್) ಮರು ಸ್ಥಾಪಿಸುವಂತೆ ಒತ್ತಾಯಿಸಿದ್ದವು.
ಇಂದಿನ ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್, "ಎನ್ಪಿಎಸ್ ಪರಿಶೀಲನಾ ಸಮಿತಿ ತನ್ನ ಕೆಲಸದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಕೇಂದ್ರ ಸರ್ಕಾರಿ ನೌಕರಿಗಾಗಿ ಜಾಯಿಂಟ್ ಕನ್ಸಲ್ಟೇಟಿವ್ ಮೆಶಿನರಿಯ ರಾಷ್ಟ್ರೀಯ ಮಂಡಳಿಯ ಸಿಬ್ಬಂದಿ ವರ್ಗವು ರಚನಾತ್ಮಕ ವಿಧಾನವನ್ನು ತೆಗೆದುಕೊಂಡಿದೆ." ಎಂದು ಹೇಳಿದರು.
ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಹಣಕಾಸಿನ ವಿವೇಕ ಉಳಿಸಿಕೊಂಡು ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವ ಪರಿಹಾರವನ್ನು ಅಭಿವೃದ್ಧಿಪಡಿಸಲಾಗುವುದು. ಹಳೇ ಪಿಂಚಣಿ ಯೋಜನೆ ಅಡಿ ನಿವೃತ್ತ ಸರ್ಕಾರಿ ನೌಕರರು ತಮ್ಮ ಕೊನೆಯ ಸಂಬಳದ ಶೇ 50ರಷ್ಟು ಮಾಸಿಕ ಪಿಂಚಣಿಯನ್ನು ಪಡೆದಿದ್ದಾರೆ. ಡಿಎ ದರಗಳ ಹೆಚ್ಚಳದಿಂದಾಗಿ ಆ ಮೊತ್ತವೂ ಹೆಚ್ಚುತ್ತಲೇ ಇದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬಜೆಟ್ನಲ್ಲಿ ಹಣಕಾಸು ಸಚಿವರು ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಸುಧಾರಿಸುವಂತಹ ಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಎನ್ಪಿಎಸ್ಗಾಗಿ ಉದ್ಯೋಗದಾತರು, ಉದ್ಯೋಗಿಯ ವೇತನದಿಂದ ಕಡಿತ ಮಾಡುವ ಹಣವನ್ನು 10 ಶೇ.ದಿಂದ 14 ಶೇ.ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಅದೇ ರೀತಿ ಖಾಸಗಿ ವಲಯ, ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಉದ್ಯಮಗಳಲ್ಲಿನ ಉದ್ಯೋಗಿಗಳ ವೇತನದ ಶೇ. 14ರಷ್ಟು ಈ ವೆಚ್ಚವನ್ನು ಕಡಿತಗೊಳಿಸಿ, ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಲು ಪ್ರಸ್ತಾಪಿಸಲಾಗಿದೆ.
ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಎನ್ಪಿಎಸ್ ವಾತ್ಸಲ್ಯ: ತಮ್ಮ ಅಪ್ರಾಪ್ತ ಮಕ್ಕಳ ಭದ್ರ ಭವಿಷ್ಯಕ್ಕಾಗಿ ಹೆತ್ತವರು ಅಥವಾ ಪೋಷಕರು ಕೊಡುಗೆ ನೀಡುವಂತಹ ಎನ್ಪಿಎಸ್ - ವಾತ್ಸಲ್ಯ ಎಂಬ ಹೊಸ ಯೋಜನೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅಪ್ರಾಪ್ತರ ಭವಿಷ್ಯಕ್ಕಾಗಿ ಅವರ ಹೆತ್ತವರು ಅಥವಾ ಪೋಷಕರು ಮಾಡುವಂತಹ ದೀರ್ಘಾವಧಿಯ ಉಳಿಯಾತ ಯೋಜನೆ ಇದಾಗಿದೆ. ಮಕ್ಕಳ ಹೆಸರಿನಲ್ಲಿ ಪೋಷಕರು ಪಾಲಿಸಿಗಳನ್ನು ತೆಗೆದುಕೊಂಡು, ಮಕ್ಕಳ ಪರವಾಗಿ ಹಣ ಹೂಡಿಕೆ ಮಾಡಬೇಕು. ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ನಂತರ ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯ ಪಾಲಿಸಿಯನ್ನಾಗಿ ಪರಿವರ್ತಿಸಬಹುದು.