ಕೊಯಮತ್ತೂರು(ತಮಿಳುನಾಡು): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಡಿಎಂಕೆ (ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ) ಈರೋಡ್ ಕ್ಷೇತ್ರದ ಸಂಸದ ಗಣೇಶಮೂರ್ತಿ ಅವರು ಇಂದು (ಮಾರ್ಚ್ 28) ಬೆಳಗ್ಗೆ 5 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾದರು.
ನಾಲ್ಕು ದಿನಗಳ (ಮಾರ್ಚ್ 24) ಹಿಂದೆ ತಮ್ಮ ಮನೆಯಲ್ಲಿ ತೆಂಗಿನ ಮರಗಳಿಗೆ ಬಳಸುವ ಕೀಟನಾಶಕ ಸೇವಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿಶೇಷ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಗುರುವಾರ ಬೆಳಗ್ಗೆ ಹೃದಯಾಘಾತವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
2019ರ ಚುನಾವಣೆಯಲ್ಲಿ ಗಣೇಶಮೂರ್ತಿ ಈರೋಡ್ ಕ್ಷೇತ್ರದ ಸಂಸದರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಮತ್ತು ಎಂಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಪಾಲನೆಯ ಹಿನ್ನೆಲೆಯಲ್ಲಿ ಈರೋಡ್ ಕ್ಷೇತ್ರ ಡಿಎಂಕೆ ಪಾಲಾಗಿತ್ತು. ಹೀಗಾಗಿ ತಮಗೆ ಟಿಕೆಟ್ ತಪ್ಪಿದ್ದಕ್ಕೆ ನೊಂದಿದ್ದ ಗಣೇಶ್ಮೂರ್ತಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಹಿಳೆಯರಿಗೆ ಮಾಸಿಕ 1 ಸಾವಿರ, 356ನೇ ವಿಧಿ ರದ್ದು: ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ಘೋಷಿಸಿದ ಡಿಎಂಕೆ