ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ದಟ್ಟಾರಣ್ಯದಲ್ಲಿ ಶನಿವಾರ ಭಯೋತ್ಪಾದಕರಿಂದ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಓರ್ವ ನಾಗರಿಕ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಭೌಗೋಳಿಕ ಸವಾಲಿನ ಹೊರತಾಗಿಯೂ, ಭಯೋತ್ಪಾದಕರ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರದ ಅಹ್ಲಾನ್ ಗಗರಮಂಡು ಅರಣ್ಯದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ಬಳಿಕ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆ ನಡೆಸಲಾಯಿತು. ಜಂಟಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ದಳದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಲು ಪ್ರಾರಂಭಿಸಿದಾಗ ಎನ್‌ಕೌಂಟರ್ ಪ್ರಾರಂಭವಾಯಿತು. ತಂಡದಲ್ಲಿ ಪ್ಯಾರಾ ಕಮಾಂಡೋಗಳು ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಸೇನಾ ಸಿಬ್ಬಂದಿ ಇದ್ದರು. ಸೇನಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಗಾಯಗೊಂಡ ಉಳಿದ ಸಿಬ್ಬಂದಿ ಮತ್ತು ನಾಗರಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಗುಂಡಿನ ಚಕಮಕಿ ನಡೆದ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಅಂತಿಮ ಮಾಹಿತಿ ಬರುವವರೆಗೂ ಉಗ್ರರನ್ನು ಪತ್ತೆ ಹಚ್ಚಿ ಹತ್ಯೆ ಮಾಡುವ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೋಕರ್‌ನಾಗ್‌ನಲ್ಲಿ ಇದೇ ರೀತಿಯ ಎನ್‌ಕೌಂಟರ್ ನಡೆದಿತ್ತು. ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಉಪ ಪೊಲೀಸ್ ಅಧೀಕ್ಷಕ ಹುಮಾಯೂನ್ ಭಟ್ ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಆಗ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಸಹ ಹತ್ಯೆ ಮಾಡಲಾಗಿತ್ತು. ಇತ್ತೀಚಿನ ಅನಂತನಾಗ್ ಘಟನೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರು ದೋಡಾದಲ್ಲಿ ನಡೆದ ಎನ್‌ಕೌಂಟರ್‌ನಿಂದ ತಪ್ಪಿಸಿಕೊಂಡು, ನಂತರ ಕಿಶ್ತ್ವಾರ್ ಜಿಲ್ಲೆಯಿಂದ ಗಡಿ ದಾಟಿರಬಹುದು ಎಂದು ಶಂಕಿಸಲಾಗಿದೆ.
"ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಭಯೋತ್ಪಾದಕರ ಮೇಲೆ ನಿರಂತರವಾಗಿ ನಿಗಾ ಇರಿಸಿದ್ದರು. ಮತ್ತು ಆಗಸ್ಟ್ 9 ಮತ್ತು 10ರ ರಾತ್ರಿ, ಕಪ್ರಾನ್‌ನ ಪೂರ್ವ ಪರ್ವತಗಳಲ್ಲಿ ಈ ಭಯೋತ್ಪಾದಕರು ಅಡಗಿಕೊಂಡಿದ್ದಾರೆಂಭ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು" ಎಂದು ಅಧಿಕಾರಿಗಳು ತಿಳಿಸಿದರು.
''ಘಟನಾ ಪ್ರದೇಶವು 10,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ. ದಟ್ಟವಾದ ಕಾಡು, ಬೃಹತ್ ಕಲ್ಲುಗಳು, ಸಂಕೀರ್ಣವಾದ ರಸ್ತೆಗಳಿಂದಾಗಿ ಕಾರ್ಯಾಚರಣೆಗೆ ಗಂಭೀರ ಸವಾಲು ಎದುರಾಯಿತು. ಆದರೂ ಕೂಡ ಭದ್ರತಾ ಪಡೆಗಳು ಭಯೋತ್ಪಾದಕರ ಮಟ್ಟಹಾಕಲು ಪ್ರಯತ್ನಿಸುತ್ತಿವೆ. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿಯಿತು'' ಎಂದು ರಕ್ಷಣಾ ವಕ್ತಾರರು ತಿಳಿಸಿದರು.