ನವದೆಹಲಿ: ದೆಹಲಿಯ ಕೇಜ್ರಿವಾಲ್ ಸರ್ಕಾರದ ಸಚಿವೆ ಹಾಗೂ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಕಳುಹಿಸಿದೆ. ಬಿಜೆಪಿ ದೂರಿನ ಮೇರೆಗೆ ನೋಟಿಸ್ ಜಾರಿ ಮಾಡಿರುವ ಆಯೋಗವು, ತಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ಕೇಸರಿ ಪಕ್ಷವನ್ನು ಸೇರುವಂತೆ ತಮ್ಮ ಆಪ್ತ ವಲಯದ ವ್ಯಕ್ತಿಯೊಬ್ಬರ ಮೂಲಕ ತನ್ನನ್ನು ಸಂಪರ್ಕಿಸಲಾಗಿದೆ. ಸೇರಿಕೊಳ್ಳದಿದ್ದರೆ ಒಂದು ತಿಂಗಳೊಳಗೆ ಇಡಿ (ಜಾರಿ ನಿರ್ದೇಶನಾಲಯ)ಯಿಂದ ಬಂಧಿಯಾಗಬೇಕಾಗುತ್ತದೆ ಎಂದು ಅವರು ಬೆದರಿಕೆ ಹಾಕುತ್ತಿರುವುದಾಗಿ ಅತಿಶಿ ಆರೋಪಿಸಿದ್ದರು.
ಈ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಬಿಜೆಪಿ ಘಟಕವು ಅವರಿಗೆ ಮಾನನಷ್ಟ ನೋಟಿಸ್ ಸಹ ಕಳುಹಿಸಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು. ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ, ಅತಿಶಿ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದು, ಅವರ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ತಮ್ಮ ಹೇಳಿಕೆ ನಿಜವೆಂದು ಸಾಬೀತುಪಡಿಸಲು ತಮ್ಮ ಫೋನ್ ಅನ್ನು ತನಿಖಾ ಸಂಸ್ಥೆಗೆ ಸಲ್ಲಿಸುವಂತೆ ಒತ್ತಾಯಿಸಿದ್ದರು.
ಈ ನಡುವೆ ಅವರ ಹೇಳಿಕೆ ವಿರುದ್ಧ ಬಿಜೆಪಿ ಚುನಾವಣಾ ಆಯೋಗದ ಮೊರೆ ಕೂಡ ಹೋಗಿತ್ತು. ಬಿಜೆಪಿ ದೂರಿನ ಮೇರೆಗೆ ನೋಟಿಸ್ ಜಾರಿ ಮಾಡಿರುವ ಆಯೋಗವು, ಶನಿವಾರ ಸಂಜೆ 5 ಗಂಟೆಯೊಳಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಕಳಿಸಿದೆ.
ನೀವು ದೆಹಲಿ ಸರ್ಕಾರದ ಸಚಿವೆಯಾಗಿದ್ದೀರಿ ಮತ್ತು ಪಕ್ಷದ ರಾಷ್ಟ್ರೀಯ ನಾಯಕಿಯಾಗಿದ್ದೀರಿ. ಮತದಾರರು ತಮ್ಮ ನಾಯಕರು ಸಾರ್ವಜನಿಕ ವೇದಿಕೆಯಿಂದ ಏನು ಹೇಳಿದರೂ ನಂಬುತ್ತಾರೆ. ಯಾವುದೇ ನಾಯಕರು ನೀಡಿದ ಹೇಳಿಕೆಗಳು ಜನರ ಮೇಲೆ ಪರಿಣಾಮ ಬೀರುತ್ತವೆ. ಎಎಪಿ ನಾಯಕಿ ನೀಡಿರುವ ಹೇಳಿಕೆಗಳು ವಾಸ್ತವಿಕ ಸಾಕ್ಷ್ಯವನ್ನು ಆಧರಿಸಿರಬೇಕು. ಈ ಹೇಳಿಕೆಗಳ ಸತ್ಯಾಸತ್ಯತೆಯ ಬಗ್ಗೆ ಸಂದೇಹಗಳು ಉದ್ಭವಿಸಿದಾಗ, ಅವರು ಅವುಗಳನ್ನು ದೃಢೀಕರಿಸಲು ಆಧಾರವನ್ನು ನೀಡಬೇಕಾಗುತ್ತದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ನಂತರ ಎಎಪಿ ವ್ಯವಹಾರಗಳನ್ನು ನಡೆಸುವ ಉನ್ನತ ನಾಯಕರಲ್ಲಿ ಒಬ್ಬರಾಗಿದ್ದು, ತಮ್ಮ ಪ್ರತಿಕ್ರಿಯೆ ಅವಶ್ಯಕ ಎಂದು ನೋಟಿಸ್ನಲ್ಲಿ ತಿಳಿಸಿದೆ.
ನೋಟಿಸ್ ನೀಡಿದ ಬೆನ್ನಲ್ಲೇ, ಅತಿಶಿ ಕಿಡಿಕಾರಿದ್ದಾರೆ. 'ಚುನಾವಣಾ ಆಯೋಗವು ಕಳುಹಿಸಿರುವ ನೋಟಿಸ್ ಶುಕ್ರವಾರ ಬೆಳಿಗ್ಗೆ 11:45ಕ್ಕೆ ಇಮೇಲ್ ಮೂಲಕ ಸ್ವೀಕರಿಸಿದೆ. ಆದರೆ, ನೋಟಿಸ್ ಕಳುಹಿಸುವ ಮುನ್ನಾ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಬೆಳಿಗ್ಗೆ 11:15ಕ್ಕೆ ಎಲ್ಲ ಟಿವಿ ಚಾನೆಲ್‌ಗಳಲ್ಲಿ ಈ ಸುದ್ದಿ ಪ್ರಸಾರವಾಗಿದೆ. ಬಿಜೆಪಿ ವಿರುದ್ಧ ದೂರು ನೀಡಿದರೆ ಚುನಾವಣಾ ಆಯೋಗ ಏಕೆ ನೋಟಿಸ್ ನೀಡಲಿಲ್ಲ ಎಂದು ಕೇಳಿದ ಅವರು, ಚುನಾವಣಾ ಆಯೋಗ ಬಿಜೆಪಿಯ ಅಧೀನ ಸಂಸ್ಥೆಯೇ ಎಂದು ಪ್ರಶ್ನಿಸಿದರು.
ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಇಡಿ ಮುಖ್ಯಮಂತ್ರಿಯನ್ನು ಒಂದೇ ಸಲಕ್ಕೆ ಬಂಧಿಸುತ್ತದೆ. ಈ ಬಗ್ಗೆ ಚುನಾವಣಾ ಆಯೋಗ ಇಡಿಗೆ ನೋಟಿಸ್ ಕಳುಹಿಸುತ್ತದೆಯೇ? ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಬ್ಯಾಂಕ್ ಖಾತೆಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಾಗ, ಚುನಾವಣಾ ಆಯೋಗ ಆದಾಯ ತೆರಿಗೆ ಇಲಾಖೆಗೆ ನೋಟಿಸ್ ಕಳುಹಿಸುತ್ತದೆಯೇ? ಅಂತೆಲ್ಲ ಅತಿಶಿ ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ.