ಬಾರ್ಮೆರ್, ರಾಜಸ್ಥಾನ: ಹೀಗೆ ಅರಳು ಹುರಿದಂತೆ ಮಾತನಾಡುವ ಇವರ ಹೆಸರು ನುಕ್ಲಾರಾಮ್ ಮೇಘವಾಲ್. 68 ವರ್ಷದ ಇವರು ಬಾರ್ಮೆರ್ ಜಿಲ್ಲೆಯ ಆಟಿ ಗ್ರಾಮದ ನಿವಾಸಿ. ಇವರು ಎಷ್ಟು ಜಾಣರೆಂದರೆ ವಿಶ್ವದ 40 ದೇಶಗಳು, 30 ನದಿಗಳು ಹಾಗೂ ರಾಜಸ್ಥಾನದ ಜಿಲ್ಲೆಗಳ ಹೆಸರನ್ನು ಕೆಲ ನಿಮಿಷಗಳಲ್ಲೇ ಪಟ ಪಟ ಎಂದು ಹೇಳಿ ಮುಗಿಸಬಲ್ಲರು. ವಯಸ್ಸಾದರೂ ಇವರ ಐಕ್ಯೂ ಎಳೆಯ ಮಕ್ಕಳಿಗಿಂತಲೂ ಒಂದು ಹೆಜ್ಜೆ ಮುಂದೆಯೇ ಇದೆ. ಇವರ ಐಕ್ಯೂ ನೋಡಿ ಎಲ್ಲರೂ ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳದೇ ಇರರು.
ನಕುರಾಮ್ ಕೇವಲ ನಾಲ್ಕನೇ ತರಗತಿ ಪಾಸ್ ಮಾಡಿದ್ದಾರೆ. ಆದರೆ, ಇವರ ಜ್ಞಾನ ಮಾತ್ರ ಅಗಾದ. ರಾಜಸ್ಥಾನದ ಜಿಲ್ಲೆಗಳ ಹೆಸರನ್ನು ತಡಬಡಾಯಿಸದೇ ಹೇಳುವ ಇವರು, ದೇಶದಲ್ಲಿ ಮತ್ತು ಪ್ರಪಂಚದಾದ್ಯಂತದ ಇರುವ ನದಿಗಳು ಮತ್ತು ಅವುಗಳ ದೇಶಗಳ ಹೆಸರನ್ನು ನಿಮಿಷಗಳಲ್ಲಿ ಹೇಳಬಲ್ಲರು. ನೂಕಲಾರಾಮ್ ಅವರು ನಗರದ ಬೀದಿಗಳಲ್ಲಿ ಕಸ ಸಂಗ್ರಹಿಸುವ ಮೂಲಕ ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರೂ ಭಾರಿ ಜ್ಞಾನವನ್ನು ಸಂಪಾದಿಸಿದ್ದಾರೆ.
ಅದ್ಭುತ ಐಕ್ಯೂ: ವಯಸ್ಸಾದ ನುಕ್ಲಾರಾಮ್ ಮೇಘವಾಲ್ ಸಖತ್ ಬುದ್ದಿಶಕ್ತಿಯನ್ನು ಹೊಂದಿದ್ದಾರೆ. 40 ಕ್ಕೂ ಹೆಚ್ಚು ದೇಶಗಳ ಹೆಸರುಗಳನ್ನು ಮತ್ತು ಪ್ರಪಂಚದ ಸುಮಾರು 30 ನದಿಗಳ ಹೆಸರುಗಳನ್ನ ಪಟಪಟನೇ ಹೇಳುತ್ತಾರೆ. ರಾಜಸ್ಥಾನ ಅಷ್ಟೇ ಅಲ್ಲ ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳ ಹೆಸರುಗಳನ್ನು ತಪ್ಪಿಲ್ಲದಂತೆ ಹೇಳುತ್ತಾರೆ. ಅಂದ ಹಾಗೆ ಇವರು ಯಾವುದೇ ಶಾಲಾ - ಕಾಲೇಜಿಗೆ ಹೋಗಿ ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿಲ್ಲ. ಓದಿರುವುದು ಕೇವಲ ನಾಲ್ಕನೇ ತರಗತಿ. ಪುಸ್ತಕ, ಪೇಪರ್ ಓದುವ ಆಸಕ್ತಿ ಇಟ್ಟುಕೊಂಡಿದ್ದಾರೆ. ಈ ಮೂಲಕವೇ ಅವರು ನಿತ್ಯ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ಈ ಓದಿನ ಪರಿಣಾಮವೇ ಅವರ ಬಳಿ ಇಷ್ಟೆಲ್ಲ ಮಾಹಿತಿ ಇಟ್ಟುಕೊಳ್ಳಲು ಸಾಧ್ಯವಾಗಿದೆ. ಅವರ ಈ ಬುದ್ದಿ ಶಕ್ತಿ ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.
ಕಸ ಸಂಗ್ರಹವೇ ಇವರ ಕಾಯಕ: ಮೇಘವಾಲ್ ನಗರದಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಈ ಕಸ ಸಂಗ್ರಹ ಮಾಡುವುದರಿಂದ ಬರುವ ಹಣದಿಂದಲೇ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಯಾವುದೇ ಕೆಲಸ ಚಿಕ್ಕದಲ್ಲ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಇದ್ದರೆ ಸುಖಕರ ಜೀವನ ನಡೆಸಬಹುದು ಎಂಬುದಕ್ಕೆ ಮೇಘವಾಲ್ ಉದಾಹರಣೆ ಆಗಿದ್ದಾರೆ.