ಹೈದರಾಬಾದ್: ಪ್ರತಿ 30 ವರ್ಷಗಳಿಗೊಮ್ಮೆ ಸಮಾಜದಲ್ಲಿ ಒಂದು ಪೀಳಿಗೆ ಬದಲಾಗುತ್ತದೆ. ಅವರ ಆಲೋಚನಾ ಕ್ರಮ ಬದಲಾಗುತ್ತದೆ. ಚಲನಚಿತ್ರ ನಿರ್ಮಾಪಕರು ಇದನ್ನು ಪ್ರವೃತ್ತಿ ಎಂದು ಕರೆಯುತ್ತಾರೆ. ಇದನ್ನು ಅರ್ಥಮಾಡಿಕೊಳ್ಳುವ ಮತ್ತು ಈ ಪೀಳಿಗೆಯ ಬದಲಾವಣೆಗೆ ನಾಂದಿ ಹಾಡುವವರನ್ನು ಟ್ರೆಂಡ್‌ಸೆಟರ್‌ಗಳು ಎಂದು ಕರೆಯಲಾಗುತ್ತದೆ. ಹೊಸ ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯುವವರನ್ನು ದೀವಟಿಗೆದಾರರು ಎಂದು ಕರೆಯಲಾಗುತ್ತದೆ. ಈ ರೀತಿ ತೆಲುಗು ಭಾಷೆಯ ಪತ್ರಿಕಾ ಲೋಕದಲ್ಲಿ ಈ ಜ್ಯೋತಿಯನ್ನು ಹಿಡಿದಿದ್ದು 'ಈನಾಡು' ಪತ್ರಿಕೆ. ಕಾಲಕಾಲಕ್ಕೆ ತಾಜಾತನವನ್ನು ತರುತ್ತಾ ಈ ನಾಡು ಪತ್ರಿಕೆ ಮಾಹಿತಿ ಕ್ರಾಂತಿಯನ್ನೇ ಹುಟ್ಟು ಹಾಕಿತು. 4,500 ಪ್ರಸರಣದೊಂದಿಗೆ ಪ್ರಾರಂಭಗೊಂಡ ಪತ್ರಿಕೆ ಇಂದು 13 ಲಕ್ಷಕ್ಕೂ ಹೆಚ್ಚು ಪ್ರಸರಣದೊಂದಿಗೆ ನಂಬರ್ ಒನ್ ತೆಲುಗು ದಿನಪತ್ರಿಕೆ ಎನ್ನುವ ಹೆಗ್ಗಳಿಕೆ ಪಡೆದಿದೆ. 2024ರ ಆಗಸ್ಟ್ 10ಕ್ಕೆ 'ಈನಾಡು' ಪದಗಳ ಜಗತ್ತಿನಲ್ಲಿ ತನ್ನ 50 ವರ್ಷಗಳ ಅದ್ಭುತ ಪಯಣವನ್ನು ಪೂರೈಸುತ್ತಿದೆ.
ಈನಾಡು ಸಂಸ್ಥೆಯ ಹುಟ್ಟು: ಆಗಸ್ಟ್ 10, 1974. ವಿಶಾಖಪಟ್ಟಣದ ಸೀತಮ್ಮಧಾರ ಪ್ರದೇಶದಲ್ಲಿದ್ದ ಮುಚ್ಚಿದ ಶೆಡ್ವೊಂದರಲ್ಲಿ ಮುದ್ರಣದ ಕೆಲಸ ಆರಂಭಿಸಿತು. ಆ ಸಮಯಕ್ಕೆ ಅಲ್ಲಿ ಏನಾಗುತ್ತಿದೆ ಎನ್ನುವುದರ ಸಣ್ಣ ಸುಳಿವೂ ಸುತ್ತಮುತ್ತಲಿನವರಿಗೆ ಇರಲಿಲ್ಲ. ಆದರೆ ಸದ್ದಿಲ್ಲದೆ ಹೀಗೆ ಆರಂಭವಾದ ಅಕ್ಷರಕ್ರಾಂತಿ ಮಾಹಿತಿ ಕ್ರಾಂತಿಗೆ ನಾಂದಿ ಹಾಡಿತು. ಹೀಗೆ ಸಣ್ಣದಾಗಿ ಹುಟ್ಟಿಕೊಂಡ ಸಂಸ್ಥೆ 'ಈನಾಡು' ಹುಟ್ಟಿಗೆ ವಿಳಾಸವಾಯಿತು. ಕತ್ತಲೆಯ ಮುಸುಕನ್ನು ತೊಡೆದು ಹಾಕುತ್ತಾ 'ಈನಾಡು' ಪ್ರತಿದಿನ ಬೆಳಗಿನ ಜಾವ ಓದುಗರಿಗೆ ಬಗೆಬಗೆಯ ಸುದ್ದಿಗಳನ್ನು ಬಿಚ್ಚಿಟ್ಟಿತು. ಪ್ರಾದೇಶಿಕ ಪತ್ರಿಕೆಯಾಗಿ ತನ್ನ ಪಯಣವನ್ನು ಆರಂಭಿಸಿದ ಈನಾಡು ಶೀಘ್ರದಲ್ಲೇ ಅತ್ಯಧಿಕ ಪ್ರಸಾರದೊಂದಿಗೆ ಉತ್ತುಂಗಕ್ಕೇರಿತು. ಇದೀಗ ತನ್ನ ಸುವರ್ಣ ಮಹೋತ್ಸವವನ್ನು ಹೆಮ್ಮೆಯಿಂದ ಆಚರಿಕೊಳ್ಳುತ್ತಿದೆ.
ಸುವರ್ಣ ಸಂಭ್ರಮವನ್ನು ಹಂಚಿಕೊಂಡಿರುವ ಈನಾಡು ವ್ಯವಸ್ಥಾಪಕ ನಿರ್ದೇಶಕ ಕಿರಣ್ ರಾವ್, "50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈನಾಡು ಪಯಣದಲ್ಲಿ 35 ವರ್ಷಗಳ ಕಾಲ ಸಂಸ್ಥೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಅಧ್ಯಕ್ಷರು ಸಂಸ್ಥೆಯಲ್ಲಿ ಬೆಳೆಸಿದ ಶಿಸ್ತಿನಿಂದ ಇದು ಸಾಧ್ಯವಾಯಿತು. ಯಾಕೆಂದರೆ ಸಂಸ್ಥೆಯಲ್ಲಿರುವ ಎಲ್ಲರಂತೆ ಅದೇ ಶಿಸ್ತನ್ನು ನಾನು ಪಾಲಿಸುತ್ತಿದ್ದೇನೆ. ಅದರಿಂದಾಗಿಯೇ ಈ ಪ್ರಯಾಣ ಮುಂದುವರಿಯುತ್ತಿದೆ." ಎಂದಿದ್ದಾರೆ.
ಪದಗಳ ಮಾಂತ್ರಿಕ ರಾಮೋಜಿ ರಾವ್!: ಈನಾಡು ಅಧ್ಯಕ್ಷರಾಗಿದ್ದ ದಿ.ರಾಮೋಜಿ ರಾವ್ ಅವರಿಗೆ ಪತ್ರಿಕೆ ಆರಂಭಿಸುವ ಯೋಚನೆ ಇರಲಿಲ್ಲ. ಅದೊಂದು ಅನಿರೀಕ್ಷಿತ ಪ್ರಯಾಣ. ಸ್ವತಃ ತಾನಾಗಿಯೇ ವಿಕಾಸಗೊಂಡ ಪತ್ರಿಕೆ ಇದು. ಬಹಳ ಸಾಮಾನ್ಯವಾದ ಸನ್ನಿವೇಶವೊಂದರಿಂದ "ಈನಾಡು" ದೈನಿಕ ಹುಟ್ಟಿಕೊಂಡಿತು ಎಂದರೂ ತಪ್ಪಾಗಲಾರದು.
ರಾಮೋಜಿ ರಾವ್ ಅವರಿಗೆ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಟಿ.ರಾಮಚಂದ್ರರಾವ್ ಎಂಬವರ ಪರಿಚಯವಿತ್ತು. ರಾಮೋಜಿ ರಾವ್ ಅವರಿಗೆ ಅವರಿಂದ ಜಾಹೀರಾತಿಗೆ ಸಂಬಂಧಿಸಿದ ತಂತ್ರಗಳನ್ನು ಕಲಿಯುವ ಆಸಕ್ತಿ ಮೂಡಿತು. ವಿದ್ಯಾಭ್ಯಾಸ ಮುಗಿಸಿದ ರಾಮೋಜಿ ರಾವ್ ದೆಹಲಿಯ ಜಾಹೀರಾತು ಏಜೆನ್ಸಿಯೊಂದರಲ್ಲಿ ಕಲಾವಿದರಾಗಿ ಕೆಲಸಕ್ಕೆ ಸೇರಿದರು. ಅಲ್ಲಿ ಮೂರು ವರ್ಷ ಕೆಲಸ ಮಾಡಿ ಮತ್ತೆ ಹೈದರಾಬಾದ್ಗೆ ಬಂದರು. ಆ ದಿನಗಳಲ್ಲಿ, ಗೋಯೆಂಕಾ ಅವರ ಆಂಧ್ರಪ್ರಭ ತೆಲುಗು ಮಾಧ್ಯಮ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಸಾರ ಹೊಂದಿತ್ತು. ಆದರೆ ತೆಲುಗು ವ್ಯಕ್ತಿಗಳು ಸ್ಥಾಪಿಸಿದ ಪತ್ರಿಕೆಗಳು ಮಾತ್ರ ಉಳಿದ ಸ್ಥಾನಗಳಲ್ಲಿದ್ದವು. ತೆಲುಗು ನೆಲದಲ್ಲಿ ತೆಲುಗು ಪತ್ರಿಕೆಗಳು ಏಕೆ ಹಿಂದುಳಿಯಬೇಕು? ಎನ್ನುವ ಪ್ರಶ್ನೆಯನ್ನು ರಾಮೋಜಿ ರಾವ್ ಅವರೇ ಸ್ವತಃ ತಮ್ಮನ್ನೇ ಕೇಳಿಕೊಂಡರು. ಈ ಪ್ರಶ್ನೆಯೇ ಈನಾಡು ದಿನಪತ್ರಿಕೆ ಸ್ಥಾಪಿಸುವ ಆಲೋಚನೆ ಚಿಗುರೊಡೆಯಲು ನಾಂದಿಯಾಯಿತು.
ಪತ್ರಿಕೆಯನ್ನು ಪ್ರಾರಂಭಿಸುವುದು ಹೌದು. ಆದರೆ ಅದನ್ನು ಪ್ರಾರಂಭಿಸುವುದಾದರು ಎಲ್ಲಿ? ಹೇಗೆ ಪ್ರಾರಂಭಿಸುವುದು ಎನ್ನುವ ಪ್ರಶ್ನೆ ಮೂಡಿತು. ಯಾಕೆಂದರೆ ಆಗ ತೆಲುಗು ಪತ್ರಿಕೆಗಳೆಲ್ಲ ವಿಜಯವಾಡದಲ್ಲಿ ಪ್ರಕಟವಾಗುತ್ತಿದ್ದವು. ಅಲ್ಲಿ ಪ್ರಕಟಗೊಳ್ಳುವ ಪತ್ರಿಕೆಗಳನ್ನು ನಂತರ ಬೇರೆಡೆಗೆ ಸಾಗಿಸಲಾಗುತ್ತಿತ್ತು. ಪತ್ರಿಕೆಗಳನ್ನು ವಿಜಯವಾಡದಿಂದ ರೈಲಿನಲ್ಲಿ ವಿಶಾಖಪಟ್ಟಣಕ್ಕೆ ಕಳುಹಿಸಬೇಕಾಗಿತ್ತು. ಪತ್ರಿಕೆಗಳು ರೈಲಿನಲ್ಲಿ ಬಂದು ಓದುಗರನ್ನು ತಲುಪುವಷ್ಟರಲ್ಲಿ ಮಧ್ಯಾಹ್ನದ ಸಮಯವಾಗುತ್ತಿತ್ತು. ಉತ್ತರ ಆಂಧ್ರದ ಇತರ ಭಾಗಗಳಿಗೆ ತಲುಪುವಾಗ ಸಂಜೆಯಾಗುತ್ತಿತ್ತು.
ವಿಜಯವಾಡದಲ್ಲಿ ಪತ್ರಿಕೆ ಆರಂಭಿಸಿದರೆ ಈಗಾಗಲೇ ಇದ್ದವರಲ್ಲಿ ಇವರೂ ಒಬ್ಬರಾಗುತ್ತಿದ್ದರು ಅಷ್ಟೆ. ಬೇರೆ ಪತ್ರಿಕೆಗಳಿಗೆ ಪ್ರತಿಸ್ಪರ್ಧಿಯಾಗುತ್ತಾರೆ ಎನ್ನುವುದನ್ನು ಬಿಟ್ಟರೆ ಅದರಲ್ಲಿ ವಿಶೇಷ ಏನೂ ಇರುತ್ತಿರಲಿಲ್ಲ. ಮಧ್ಯಾಹ್ನದವರೆಗೆ ಬೇರೆ ಯಾವ ಪತ್ರಿಕೆಯ ಮುಖವನ್ನೂ ನೋಡದ ಉತ್ತರ ಆಂಧ್ರದಲ್ಲಿ ತಾವೇ ಮೊದಲಿಗರಾಗಬೇಕು ಎಂದು ಯೋಚಿಸಿದ ರಾಮೋಜಿ ರಾವ್, ಆಗ ಯಾವ ಪತ್ರಿಕೆಯೂ ಮುದ್ರಣವಾಗದ ವಿಶಾಖಪಟ್ಟಣದಲ್ಲಿ ತಮ್ಮ ಮೊದಲ ಹೆಜ್ಜೆ ಇಡಲು ನಿರ್ಧರಿಸಿದರು. ಚೀನಾದ ಯುದ್ಧ ತಂತ್ರ "ನೋ ಮ್ಯಾನ್ಸ್ ಲ್ಯಾಂಡ್" ಸಿದ್ಧಾಂತ ಈ ನಿರ್ಧಾರಕ್ಕೆ ಸ್ಫೂರ್ತಿ ಎಂದು ರಾಮೋಜಿ ರಾವ್ ಹೇಳುತ್ತಿದ್ದರು.
ಒಂದು ಧೈರ್ಯದ ಪ್ರಾರಂಭ: ವಿಶಾಖಪಟ್ಟಣದಲ್ಲಿ ನಿಯತಕಾಲಿಕವನ್ನು ಪ್ರಾರಂಭಿಸುವುದು ಒಂದು ಧೈರ್ಯವಾದರೆ, ಅದಕ್ಕೆ ಆರಿಸಿದ ಹೆಸರು ಸಂವೇದನಾಶೀಲವಾಗಿತ್ತು! ಆ ಕಾಲದಲ್ಲಿ ತೆಲುಗು ಪತ್ರಿಕೆಗಳೆಲ್ಲ ತಮ್ಮ ಹೆಸರಿನಲ್ಲಿ 'ಆಂಧ್ರ' ಪದವನ್ನು ಹೊಂದಿದ್ದವು. ಉದಾಹರಣೆಗೆ ಆಂಧ್ರ ಪತ್ರಿಕೆ, ಆಂಧ್ರಪ್ರಭ, ಆಂಧ್ರ ಜನತಾ, ಆಂಧ್ರ ಜ್ಯೋತಿ, ವಿಶಾಲಾಂಧ್ರ ಹೀಗೆ. ಅಂತಹ ಸಂದರ್ಭಗಳಲ್ಲಿ ಆಂಧ್ರ ಪದವಿಲ್ಲದೆ ಪತ್ರಿಕೆಯೊಂದಕ್ಕೆ ಹೆಸರಿಡುವುದು ಮತ್ತೊಂದು ಧೈರ್ಯವಾಗಿತ್ತು! ರಾಮೋಜಿ ರಾವ್ ಅವರಿಗೆ ಯಾರನ್ನೂ ಅನುಕರಿಸುವ ಅಭ್ಯಾಸ ಇರಲಿಲ್ಲ. ಹಾಗಾಗಿ ಪತ್ರಿಕೆಗೆ 'ಈನಾಡು' ಎಂದು ಹೆಸರಿಸಲಾಯಿತು. 'ನಾಡು' ಎಂಬುದಕ್ಕೆ 'ಸ್ಥಳ ಮತ್ತು ದಿನ' ಎಂಬ ಎರಡು ಅರ್ಥಗಳಿವೆ. ಈನಾಡು ಎಂದರೆ ಈ ಸ್ಥಳ ಅಥವಾ ಈ ದಿನ. ಈ ಹೆಸರಿನ ಜೊತೆಗೆ, ಬಲವಾದ ಪ್ರಾದೇಶಿಕ ಬಂಧವನ್ನೂ ಸ್ಥಾಪಿಸಲಾಯಿತು.
ವಿಶಾಖಪಟ್ಟಣಂನ ಸೀತಮ್ಮಧಾರ ಪ್ರದೇಶದ ನಕ್ಕವಾನಿಪಾಲೆಂನಲ್ಲಿ ಆ ಸಮಯದಲ್ಲಿ ಮುಚ್ಚಲಾಗಿದ್ದ ಸ್ಟುಡಿಯೋವನ್ನು ಗುತ್ತಿಗೆಗೆ ತೆಗೆದುಕೊಳ್ಳಲಾಯಿತು. ಅದನ್ನು ದುರಸ್ತಿ ಮಾಡಿ, ಪತ್ರಿಕೆ ಮುದ್ರಿಸಲು, ಸೆಕೆಂಡ್ ಹ್ಯಾಂಡ್ ಡ್ಯೂಪ್ಲೆಕ್ಸ್ ಫ್ಲಾಟ್‌ಬೆಡ್ ರೋಟರಿ ಪ್ರಿಂಟಿಂಗ್ ಪ್ರೆಸ್ ಅನ್ನು ಮುಂಬೈನ ನವಹಿಂದ್ ಟೈಮ್ಸ್‌ನಿಂದ ಖರೀದಿಸಲಾಯಿತು. ಆಗ ಅದರ ಬೆಲೆ ಒಂದು ಲಕ್ಷದ ಐದು ಸಾವಿರ ರೂಪಾಯಿ. ಸುಮಾರು ಐದಾರು ದಿನ ಮೊದಲೇ ಟ್ರಯಲ್ ರನ್ ಮಾಡಲಾಯಿತು. ಎಲ್ಲವನ್ನೂ ಯೋಜಿಸಿದಂತೆ ಸಿದ್ಧಪಡಿಸಲಾಯಿತು. ಆಗಸ್ಟ್ 9, 1974 ರ ಸಂಜೆ ಶುಭ ಘಳಿಗೆಯಲ್ಲಿ ರಾಮೋಜಿ ರಾವ್ ಅವರು ಈನಾಡಿನ ಮೊದಲ ಆವೃತ್ತಿ ಮುದ್ರಿಸಲು ಕೆಲಸಗಾರರೊಬ್ಬರಿಂದ ಸ್ವಿಚ್ ಆನ್ ಮಾಡಿಸಿದರು. ಅದರ ಫಲವಾಗಿ ಬೆಳಗಾಗುವ ಮುನ್ನವೇ ವಿಶಾಖಪಟ್ಟಣದಲ್ಲಿ ಜನರ ಮನೆ ಬಾಗಿಲಿಗೆ ಪತ್ರಿಕೆ ತಲುಪಿತ್ತು. ಅದು ಆಗಸ್ಟ್ 10ರ ಈನಾಡು ಸಂಚಿಕೆಯಾಗಿತ್ತು.
"ಈನಾಡು ನಿಮ್ಮ ಪತ್ರಿಕೆ ಎಂದು ರಾಮೋಜಿ ರಾವ್ ಅವರು ಆಗ ಗಟ್ಟಿಯಾಗಿ ಹೇಳಿದರು, ಅದರಷ್ಟೇ ಗಟ್ಟಿಯಾಗಿ ಓದುಗರೂ ಕೂಡ ಇಂದಿಗೂ 'ಇದು ನಮ್ಮ ಪತ್ರಿಕೆ' ಎಂದು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಅದು ಈನಾಡು ಪತ್ರಿಕೆಯ ಖ್ಯಾತಿ. ಈನಾಡು ಪತ್ರಿಕೆಯ ಪ್ರಗತಿ. ಹಾಗಾಗಿ ಈನಾಡು ತೆಲುಗು ಕುಟುಂಬಗಳ ಜೀವನದ ಪ್ರಮುಖ ಭಾಗವಾಗಿದೆ. ಈನಾಡು ಸುದ್ದಿಯನ್ನೇ ನಂಬುವಂತಹ ಲಕ್ಷಾಂತರ ಓದುಗರನ್ನು ಈನಾಡು ಪತ್ರಿಕೆ ಹೊಂದಿದೆ. ಅದೇ ರೀತಿ ಈಟಿವಿಯಲ್ಲಿ. ಯಾವುದೇ ಚಾನೆಲ್ಗಳಲ್ಲಿ ಸುದ್ದಿ ಬಂದರೆ, ಆ ಸುದ್ದಿ ನಿಜವೋ ಅಲ್ಲವೋ ಎಂದು ತಿಳಿಯಲು ಜನರು ಈಟಿವಿ ನೋಡುತ್ತಾರೆ" ಎನ್ನುತ್ತಾರೆ ಈನಾಡು ಆಂಧ್ರಪ್ರದೇಶ ಸಂಪಾದಕರು ಎಂ.ನಾಗೇಶ್ವರರಾವ್.
ಸುಲಭ ಪದಗಳ ಬಳಕೆ: "ಈನಾಡು ಬರುವ ಮೊದಲು ಸಾಕಷ್ಟು ಸಂಸ್ಕೃತ ಪದಗಳು ಬಳಕೆಯಾಗುತ್ತಿದ್ದವು. ಜನರಿಗೆ ಆ ಭಾಷೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಓದುಗರು ಪತ್ರಿಕೆಗಳಿಂದ ದೂರ ಉಳಿದರು. ಸುಲಭವಾಗಿ ಅರ್ಥವಾಗುವ ಸಾಮಾನ್ಯ ಪದಗಳ ಬಳಕೆಯನ್ನು ಪತ್ರಿಕಾ ಭಾಷೆಯಲ್ಲಿ ಅಳವಡಿಸಿ ಬದಲಾವಣೆ ತಂದ ಕೀರ್ತಿ ರಾಮೋಜಿ ರಾವ್ ಅವರಿಗೆ ಸಲ್ಲುತ್ತದೆ. ಇದರಿಂದ ಸುದ್ದಿಯ ಮಾಹಿತಿ ಪರಿಣಾಮಕಾರಿಯಾಗಿ ಜನರಿಗೆ ತಲುಪುತ್ತದೆ." ಎಂದು ಈನಾಡು, ತೆಲಂಗಾಣದ ಸಂಪಾದಕ ಡಿಎನ್ ಪ್ರಸಾದ್ ಹೇಳುತ್ತಾರೆ.
1974 ರ ಹೊತ್ತಿಗೆ, ಆಂಧ್ರಪ್ರದೇಶದ ಒಟ್ಟು ಜನಸಂಖ್ಯೆ ಒಂದು ಕೋಟಿ ಆಗಿತ್ತು. ತೆಲುಗು ದಿನಪತ್ರಿಕೆಗಳ ಪ್ರಸಾರ ಕೇವಲ ಎರಡು ಲಕ್ಷ. ಉಳಿದ 90 ಲಕ್ಷ ಜನರನ್ನು ತಲುಪುವುದು ತಮ್ಮ ಗುರಿಯಾಗಬೇಕು ಎಂದು ರಾಮೋಜಿ ರಾವ್ ಸಿಬ್ಬಂದಿಗೆ ಹೇಳಿದ್ದರು. 1975 ರ ಡಿಸೆಂಬರ್ 17 ರಂದು ಹೈದರಾಬಾದ್‌ನಲ್ಲಿ ಈನಾಡು ಉದಯಿಸಿತು. ಆಗಿನ ಸಿಎಂ ಜಲಗಂ ವೆಂಗಲರಾವ್, ಆಗಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವುಲಾ ಸಾಂಬಶಿವರಾವ್ ಮತ್ತು ತೆಲುಗು ನಟರಾದ NTR ಮತ್ತು ANR ಅವರ ಸಮ್ಮುಖದಲ್ಲಿ ಹೈದರಾಬಾದ್ ಆವೃತ್ತಿ ಪ್ರಾರಂಭವಾಯಿತು.
1978 ರ ಮೇ ದಿನದಂದು, ಆಗಿನ ರಾಜ್ಯಪಾಲರಾದ ಶಾರದಾ ಮುಖರ್ಜಿಯವರ ಕೈಯಲ್ಲಿ ಈನಾಡು ವಿಜಯವಾಡ ಆವೃತ್ತಿ ಪ್ರಾರಂಭವಾಯಿತು. ವಿಜಯವಾಡ ಆವೃತ್ತಿ ಪ್ರಾರಂಭದಲ್ಲಿದ್ದ ಒಂದು ಲಕ್ಷ ಮೈಲಿಗಲ್ಲನ್ನು ದಾಟಿ ಆಂಧ್ರಪ್ರಭವನ್ನು ಹಿಂದಿಕ್ಕುವ ಮೂಲಕ ಪ್ರಮುಖ ತೆಲುಗು ದಿನಪತ್ರಿಕೆ ಸ್ಥಾನವನ್ನು ಪಡೆದುಕೊಂಡಿತ್ತು. 46 ವರ್ಷಗಳಿಂದ ಈನಾಡು ನಂಬರ್ ಒನ್ ಸ್ಥಾನದಲ್ಲಿದೆ. ನಾಲ್ಕನೇ ಘಟಕವನ್ನು ತಿರುಪತಿಯಲ್ಲಿ ಆರಂಭಿಸಲಾಯಿತು. 2002 ಜೂನ್ 30 ರಂದು, ಒಂದೇ ದಿನದಲ್ಲಿ ಏಳು ಘಟಕಗಳನ್ನು ಪ್ರಾರಂಭಿಸುವ ಮೂಲಕ ಹೊಸ ಟ್ರೆಂಡ್ ಅನ್ನು ಈನಾಡು ಸ್ಥಾಪಿಸಿತ್ತು. ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದ ರಾಜಧಾನಿಗಳಲ್ಲೂ ಪತ್ರಿಕೆಯ ಹೊಸ ಆವೃತ್ತಿಗಳನ್ನ ಸ್ಥಾಪಿಸುವ ಮೂಲಕ ತನ್ನ ಪಯಣವನ್ನು ಮುಂದುವರೆಸಿದೆ.
ಸೆಪ್ಟೆಂಬರ್ 11, 2002 ರಂದು ರಾಮೋಜಿ ರಾವ್ ಅವರು ದೆಹಲಿ ಆವೃತ್ತಿಯನ್ನೂ ಪ್ರಾರಂಭಿಸಿದ್ದರು. ಒಟ್ಟು 23 ಆವೃತ್ತಿಗಳೊಂದಿಗೆ ಈನಾಡು ಹಂತ ಹಂತವಾಗಿ ವಿಸ್ತಾರಗೊಂಡಿದ್ದಲ್ಲದೆ ತೆಲುಗು ಜನರಿರುವಲ್ಲೆಲ್ಲಾ ಬೇರೂರಿದೆ. 1974 ರಲ್ಲಿ 32 ಏಜೆನ್ಸಿಗಳೊಂದಿಗೆ ಈನಾಡು ಪತ್ರಿಕೆ ಆರಂಭಿಕ ಪ್ರಸಾರ 4,500 ಆಗಿತ್ತು. 50 ವರ್ಷಗಳ ಪಯಣದಲ್ಲಿ, ಈನಾಡು ಈಗ 11,000 ಏಜೆನ್ಸಿಗಳೊಂದಿಗೆ 13 ಲಕ್ಷಕ್ಕೂ ಹೆಚ್ಚು ಪ್ರಸರಣ ಹೊಂದಿದ್ದು, "ದಿ ಲಾರ್ಜೆಸ್ಟ್ ತೆಲುಗು ಡೈಲಿ"ಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ಯಾರಿಗೂ ಸರಿಸಾಟಿಯಿಲ್ಲದ ಪ್ರಸರಣದ ಉತ್ತುಂಗದಲ್ಲಿ ಈನಾಡು ನೆಲೆಯೂರಿದೆ.