ನವದೆಹಲಿ: ಜುಲೈನಿಂದ ಜಾರಿಗೆ ಬಂದಿರುವ ಹೊಸ ಅಪರಾಧ ಕಾನೂನುಗಳಲ್ಲಿ ಪತ್ರಕರ್ತರ ವಿರುದ್ಧ ಪ್ರಬಲ ನಿಯಮಗಳನ್ನು ತರಲಾಗಿದೆ. ಇದರಿಂದ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಾನೂನುಗಳನ್ನು ಮರುಪರಿಶೀಲಿಸಿ ಎಂದು ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ಕೋರಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದು, ಪತ್ರಕರ್ತರ ವಿರುದ್ಧ ಹೊಸ ಕ್ರಿಮಿನಲ್ ಕಾನೂನುಗಳ ಅಡಿ ಅನೇಕ ನಿಬಂಧನೆಗಳನ್ನು ಹಾಕಲಾಗಿದೆ. ಆಕ್ರಮಣಕಾರಿ ಸುದ್ದಿ ಬಿತ್ತರಿಸಿದಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153A , 153B, 295A, 298, 502 ಮತ್ತು 505 ರ ಪ್ರಕಾರ ಎಫ್ಐಆರ್ ದಾಖಲಿಸಲು ಅವಕಾಶ ನೀಡಲಾಗಿದೆ. ವರದಿ ಮಾಡುವ ಪತ್ರಕರ್ತರ ವಿರುದ್ಧ ಈ ನಿಯಮಗಳು ಕಠಿಣವಾಗಿವೆ. ಇದು ಕೆಲಸದ ಮೇಲೆ ಪ್ರಭಾವ ಬೀರಲಿದೆ ಎಂದು ಉಲ್ಲೇಖಿಸಲಾಗಿದೆ.
ಗಿಲ್ಡ್ ಸಂಪರ್ಕಿಸಲು ಸಲಹೆ: ಯಾವುದೇ ಪ್ರಕರಣದಲ್ಲಿ ಪತ್ರಕರ್ತರ ವಿರುದ್ಧ ಕೇಸ್ ದಾಖಲಿಸಬೇಕಾದಲ್ಲಿ ಮೊದಲು ಎಡಿಟರ್ಸ್ ಗಿಲ್ಡ್ ಅನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಲಾಗಿದೆ. ತಮ್ಮ ಕರ್ತವ್ಯದ ಸಂದರ್ಭದಲ್ಲಿ ಕ್ರಮಗಳಿಗಾಗಿ ಪತ್ರಿಕಾ/ಮಾಧ್ಯಮ ಸದಸ್ಯರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವಾಗ ಪತ್ರಕರ್ತರ ಸಂಸ್ಥೆಯ ಜೊತೆಗೆ ಸಮಾಲೋಚನೆ ಮತ್ತು ಕೆಲವು ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದಿದೆ.
ಪತ್ರಕರ್ತರ ವಿರುದ್ಧದ ದೂರನ್ನು ದಾಖಲಿಸುವಾಗ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಯಿಂದ ಪರಿಶೀಲಿಸಬೇಕು. ಈ ಬಗ್ಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಗಮನಕ್ಕೆ ತರಬಹುದು. ಹೊಸದಾಗಿ ಅಧಿಸೂಚಿಸಲಾದ ಕ್ರಿಮಿನಲ್ ಕಾನೂನುಗಳಲ್ಲಿನ ನಿಬಂಧನೆಗಳು ಕಳವಳಕಾರಿಯಾಗಿವೆ ಎಂದು ಗಿಲ್ಡ್ ಹೇಳಿದೆ.
ಇದನ್ನೂ ಓದಿ: 'ಬುಲ್ಡೋಜರ್ ನ್ಯಾಯ'ದ ಹೊಸ ಕ್ರಿಮಿನಲ್ ಕಾನೂನುಗಳನ್ನು ಇಂಡಿಯಾ ಕೂಟ ಒಪ್ಪಲ್ಲ: ಕಾಂಗ್ರೆಸ್ - new Criminal laws