ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿ ಅವಧಿಯನ್ನು ಏಪ್ರಿಲ್ 1ರವರೆಗೆ ವಿಸ್ತರಿಸಿ ರೂಸ್ ಅವೆನ್ಯೂ ಕೋರ್ಟ್ ಗುರುವಾರ ಆದೇಶಿಸಿದೆ. ಮತ್ತೊಂದೆಡೆ, ನ್ಯಾಯಾಲಯದ ಮುಂದೆ ಹಾಜರಾಗಿದ್ದ ಕೇಜ್ರಿವಾಲ್, ತಮ್ಮ ಬಂಧನವು ರಾಜಕೀಯ ಪಿತೂರಿಯಾಗಿದೆ ಎಂದು ದೂರಿದರು.
ದೆಹಲಿ ಸರ್ಕಾರ ಜಾರಿ ಮಾಡಲು ಮುಂದಾಗಿದ್ದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21ರಂದು ಸಿಎಂ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮಾರ್ಚ್ 22ರಂದು ಕೋರ್ಟ್ ಮಾರ್ಚ್ 28ರವರೆಗೆ ಇಡಿ ವಶಕ್ಕೆ ನೀಡಿತ್ತು. ಇಂದಿನ ಅದರ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್ಗೆ ಅವರನ್ನು ಹಾಜರು ಪಡಿಸಲಾಗಿತ್ತು.
ಈ ವೇಳೆ, ನ್ಯಾಯಾಧೀಶೆ ಕಾವೇರಿ ಬವೇಜಾ ಮುಂದೆ ಕೇಜ್ರಿವಾಲ್ ಅವರನ್ನು ಹಾಜರು ಪಡಿಸಿದ ಇಡಿ ಅಧಿಕಾರಿಗಳು ಇನ್ನೂ ಏಳು ದಿನಗಳ ತಮ್ಮ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದರು. ಈ ವೇಳೆ, ಖುದ್ದು ಕೇಜ್ರಿವಾಲ್ ಅವರೇ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ''ಇಡಿ ಎರಡು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದು, ಆಪ್ ಹತ್ತಿಕ್ಕಲು ಹೊಗೆ ಪರದೆ ಸೃಷ್ಟಿಸುವುದು ಮತ್ತು ಎರಡನೆಯದು, ಸುಲಿಗೆ ದಂಧೆಯನ್ನು ಸೃಷ್ಟಿಸುವುದು. ರಾಘವ ರೆಡ್ಡಿ ಬಿಜೆಪಿಗೆ 55 ಕೋಟಿ ರೂ. ಕೊಡುಗೆ ನೀಡಿ, ಜಾಮೀನು ಖರೀದಿಸಿದ್ದಾರೆ. ಈ ಹಣದ ಜಾಡು ಸ್ಪಷ್ಟವಾಗಿ ಸ್ಥಾಪಿತವಾಗಿದೆ'' ಎಂದು ಹೇಳಿದರು.
''ನನ್ನನ್ನು ಬಂಧಿಸಲಾಗಿದೆ... ಆದರೆ, ಯಾವ ನ್ಯಾಯಾಲಯವೂ ನನ್ನನ್ನು ತಪ್ಪಿತಸ್ಥ ಎಂದು ಸಾಬೀತುಪಡಿಸಿಲ್ಲ. ಸಿಬಿಐ 31,000 ಪುಟಗಳನ್ನು ಮತ್ತು ಇಡಿ 25,000 ಪುಟಗಳ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ನೀವು ಅವುಗಳನ್ನು ಒಟ್ಟಿಗೆ ಓದಿದರೂ ಸಹ ಒಂದು ಪ್ರಶ್ನೆ ಉಳಿದಿದೆ... ನನ್ನನ್ನು ಬಂಧಿಸಿದ್ಯಾಕೆ?'' ಎಂದು ಕೇಜ್ರಿವಾಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿದರು.
''ನನ್ನ ಹೆಸರು ಕೇವಲ ನಾಲ್ಕು ಬಾರಿ ಬಂದಿದೆ. ಒಮ್ಮೆ 'ಸಿ ಅರವಿಂದ್' ಉಲ್ಲೇಖಿಸಲಾಗಿದೆ. ತಮ್ಮ ಸಮ್ಮುಖದಲ್ಲಿ ಸಿಸೋಡಿಯಾ ನನಗೆ ಕೆಲವು ದಾಖಲೆಗಳನ್ನು ನೀಡಿದರು ಎಂದು ಆ ವ್ಯಕ್ತಿ ಹೇಳಿದ್ದಾರೆ. ಆದರೆ, ಶಾಸಕರು ನನ್ನ ಮನೆಗೆ ಪ್ರತಿನಿತ್ಯ, ನನಗೆ ಕಡತಗಳನ್ನು ನೀಡಲು, ಸರ್ಕಾರದ ಚರ್ಚೆಗೆ ಬರುತ್ತಿದ್ದರು. ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲು ಈ ರೀತಿಯ ಹೇಳಿಕೆ ಸಾಕೇ?'' ಎಂದು ಕೇಜ್ರಿವಾಲ್ ವಾದಿಸಿದರು.
ಮುಂದುವರೆದು, ''ಜಾರಿ ನಿರ್ದೇಶನಾಲಯವು ನನ್ನನ್ನು ಬಲೆಗೆ ಬೀಳಿಸುವ ಒಂದೇ ಒಂದು ಧ್ಯೇಯವನ್ನು ಹೊಂದಿದೆ'' ಎಂದು ಆರೋಪಿಸಿದ ದೆಹಲಿ ಸಿಎಂ, ''ಮೂರು ಹೇಳಿಕೆಗಳನ್ನು (ಒಬ್ಬ ಸಾಕ್ಷಿಯಿಂದ) ನೀಡಲಾಗಿದೆ. ಆದರೆ, ನ್ಯಾಯಾಲಯವು ನನ್ನ ಮೇಲೆ ಆರೋಪ ಮಾಡಿದವರನ್ನು ಮಾತ್ರ ಗಮನಿಸಿದೆ. ಏಕೆ?, ಇದು ಸರಿಯಲ್ಲ. ಮತ್ತೊಬ್ಬ ಸಾಕ್ಷಿ ಮುಖ್ಯಮಂತ್ರಿ ಹೆಸರಿಲ್ಲದ ಆರು ಹೇಳಿಕೆಗಳನ್ನು ನೀಡಿದ್ದರು. ನಿಜವಾಗಿಯೂ 100 ಕೋಟಿ ಹಗರಣ ನಡೆದಿದ್ದರೆ, ಆ ಹಣ ಎಲ್ಲಿದೆ?'' ಎಂದು ಕೇಜ್ರಿವಾಲ್ ತಮ್ಮ ವಾದದಲ್ಲಿ ಮರು ಪ್ರಶ್ನಿಸಿದ್ದಾರೆ.
ಹೈಕೋರ್ಟ್ಗೆ ದೆಹಲಿ ಸಿಎಂಗೆ ರಿಲೀಫ್: ಪ್ರತ್ಯೇಕ ಬೆಳವಣಿಗೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠವು ಈ ವಿಷಯದ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿ, ಇದು ನ್ಯಾಯಾಂಗ ಹಸ್ತಕ್ಷೇಪದ ವ್ಯಾಪ್ತಿಯಿಂದ ಹೊರಗಿದೆ ಎಂದು ಹೇಳಿತು.
ಅಲ್ಲದೇ, ವಿಚಾರಣೆಯ ಸಂದರ್ಭದಲ್ಲಿ, ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ಕಾನೂನಿನ ಅಡ್ಡಿ ತೋರಿಸುವಂತೆ ಉಚ್ಛ ನ್ಯಾಯಾಲಯವು ಅರ್ಜಿದಾರರಾದ ಸುರ್ಜಿತ್ ಸಿಂಗ್ ಯಾದವ್ ಪರ ವಕೀಲರಿಗೆ ಪ್ರಶ್ನಿಸಿತು. ಪ್ರಾಯೋಗಿಕ ತೊಂದರೆಗಳಿರಬಹುದು. ಆದರೆ, ಅದು ಬೇರೆ ವಿಷಯ. ಕಾನೂನು ಅಡ್ಡಿ ಎಲ್ಲಿದೆ? ಎಂದು ಹೈಕೋರ್ಟ್ ಕೇಳಿತು.